ಭದ್ರಾ ಮೇಲ್ದಂಡೆಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ 5 ಸಾವಿರ ಕೋಟಿ ರು. ಮೀಸಲಿಗೆ ಆಗ್ರಹ

KannadaprabhaNewsNetwork |  
Published : Feb 11, 2025, 12:47 AM ISTUpdated : Feb 11, 2025, 12:24 PM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ಕನಿಷ್ಟ 5 ಸಾವಿರ ಕೋಟಿ ರು. ಮೀಸಲಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

 ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಗೆ ಮುಂದಿನ ರಾಜ್ಯ ಬಜೆಟ್ ನಲ್ಲಿ ಕನಿಷ್ಟ 5 ಸಾವಿರ ಕೋಟಿ ರು. ಮೀಸಲಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಖಂಡಿಸಿದರು. ಅನುದಾನದ ಕೊರತೆಯಿಂದಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರ 5,300 ಕೋಟಿ ರು.ಅನುದಾನ ಕೊಡಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಉದಾಸೀನ ತೋರಿದೆ. ಕೇಂದ್ರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭಿಸಿರಲಿಲ್ಲ. ಸರ್ಕಾರಗಳು ಸರಿಯಾಗಿ ಅನುದಾನ ನೀಡಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯ ಎಲ್ಲ ಕೆರೆಗಳು ಭರ್ತಿಯಾಗುತ್ತಿದ್ದವು.ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸದೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಕನಿಷ್ಡ 5 ಸಾವಿರ ಕೋಟಿ ರು. ಅನುದಾನ ಕಾಯ್ದಿರಿಸಬೇಕು. ಜಿಲ್ಲೆಯ ಎಲ್ಲ ಶಾಸಕರು ಸಿಎಂ ಅವರ ಭೇಟಿ ಮಾಡಿ ಒತ್ತಡ ಹೇರಬೇಕೆಂದು ಆಗ್ರಹಿಸಿದರು.

ರಾಜಕೀಯ ಕಾರಣಕ್ಕೆ ಒಗ್ಗಟ್ಟು ಪ್ರದರ್ಶಿಸುವ ರಾಜ್ಯದ ಬಿಜೆಪಿ ಸಂಸದರು ನೀರಾವರಿ ವಿಚಾರವಾಗಿ ಕೇಂದ್ರದ ಮುಂದೆ ದನಿಯೆತ್ತದೆ ಮಂಡಿಯೂರಿರುವುದು ಅವಮಾನಕರ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಭದ್ರಾ ಮೇಲ್ಡಂಡೆಗೆ ಘೋಷಿಸಿರುವ ಅನುದಾನ ತರುವ ವಿಚಾರದಲ್ಲಿ ಎಲ್ಲರೂ ಸಾಂಘಿಕ ಪ್ರಯತ್ನ ಮಾಡಬೇಕು. ಮೋದಿ ವಚನ ಭ್ರಷ್ಟರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕೆಂದು ಒತ್ತಾಯಿಸಿದರು.

ಬೇಸಗೆ ಆರಂಭವಾಗಿದ್ದು ರೈತಾಪಿ ಸಮುದಾಯ ಕೃಷಿಗಾಗಿ ನೀರಾವರಿ ಪಂಪುಸೆಟ್‌ಗಳ ಅವಲಂಭಿಸುವುದು ಅನಿವಾರ್ಯವಾಗಿದೆ. ಕೊಳವೆ ಬಾವಿಗಳ ಮೇಲೆ ಒತ್ತಡವಿರುವ ಕಾರಣ ಟ್ರಾನ್ಸ್‌ಫಾರ್ಮರ್‌ಗಳು ವಿಪರೀತ ಸುಡುತ್ತಿವೆ. ಸುಟ್ಟ ಟಿಸಿಗಳ ಸಕಾಲದಲ್ಲಿ ದುರಸ್ತಿ ಮಾಡಿ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸಗಳು ಆಗುತ್ತಿಲ್ಲ. ಸುಟ್ಟ ಟಿಸಿಗಳ 24 ಗಂಟೆ ಒಳಗೆ ಪುನರ್ ಪ್ರತಿಷ್ಠಾಪಿಸಲು ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಿದ್ದರೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪಿಸಿ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ಈರುಳ್ಳಿ ಹಾಗೂ ತೊಗರಿ ಬೆಳೆಗಾರರಿಗೆ ಇದುವರೆಗೂ ಪೂರ್ಣ ಪ್ರಮಾಣದ ಪರಿಹಾರ ವಿತರಿಸಿಲ್ಲ. ಬೆಳೆ ನಷ್ಟ ಪ್ರಮಾಣದ ಅಂದಾಜಿಗೆ ಜಿಲ್ಲಾ ಕೇಂದ್ರದಲ್ಲಿ ಶಾಶ್ವತ ಕೋಶ ರಚನೆ ಮಾಡಿ ಕೃಷಿ, ತೋಟಗಾರಿಕೆ ಹಾಗೂ ಹವಾಮಾನ ಇಲಾಖೆಗಳ ಲಿಂಕ್ ಮಾಡಬೇಕು. ಬೆಳೆ ನಷ್ಟಕ್ಕೊಳಗಾದ ರೈತ ಅರ್ಜಿಗಳ ಸ್ವೀಕರಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ದಾಖಲಾತಿಗಳ ಸಂಗ್ರಹಿಸಿ ಮುನ್ನಡೆಯಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ವಿಭಾಗೀಯ ಉಪಾಧ್ಯಕ್ಷ ಹೊರಕೇರಪ್ಪ, ರಾಜ್ಯ ಉಪಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬ್ಯಾಡರಹಳ್ಳಿ ಶಿವಕುಮಾರ್, ಚೇತನ್ ಯಳನಾಡು, ಮೊಳಕಾಲ್ಮುರು ಅಧ್ಯಕ್ಷ ಮಂಜಣ್ಣ, ಹುಣಿಸೆಕಟ್ಟೆ ಕಾಂತರಾಜ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು