ಹಾವೇರಿ ಬಸ್ ನಿಲ್ದಾಣಕ್ಕೆ ಸಂಗೂರು ಕರಿಯಪ್ಪ ನಾಮಕರಣಕ್ಕೆ ಒತ್ತಾಯ

KannadaprabhaNewsNetwork | Published : Feb 5, 2024 1:46 AM

ಸಾರಾಂಶ

ಹಾವೇರಿಯ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಹಾಗೂ ವೀರಮ್ಮ ದಂಪತಿ ಹೆಸರನ್ನು ನಾಮಕರಣ ಮಾಡಬೇಕು.

ಡಿವೈಎಫ್ಐ, ಎಸ್ಎಫ್ಐ ನೇತೃತ್ವದಲ್ಲಿ ಅವರ ಕುಟುಂಬಸ್ಥರಿಂದ ವಿಧಾನಸಭೆ ಉಪಾಧ್ಯಕ್ಷ, ಶಾಸಕರಿಗೆ ಮನವಿ

ಕನ್ನಡಪ್ರಭ ವಾರ್ತೆ ಹಾವೇರಿ

ಹಾವೇರಿಯ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಹಾಗೂ ವೀರಮ್ಮ ದಂಪತಿ ಹೆಸರನ್ನು ನಾಮಕರಣ ಮಾಡಬೇಕು. ಅವರಿಬ್ಬರ ಜೀವನ ಗಾಥೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ ಅವರ ಕುಟುಂಬಸ್ಥರು ಡಿವೈಎಫ್ಐ, ಎಸ್ಎಫ್ಐ ನೇತೃತ್ವದಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಡಳಿತ ಹಾಗೂ ಶಾಸಕ ಬಸವರಾಜ ಶಿವಣ್ಣನವರಗೆ ಮನವಿ ಸಲ್ಲಿಸಿದರು.

ಕರಿಯಪ್ಪರ ಪುತ್ರಿ ಚಿಕ್ಕಮ್ಮ ಆಡೂರು ಮಾತನಾಡಿ, ವಿದುರಾಶ್ವತ್ಥ ಮಾದರಿಯಲ್ಲಿ ಸಂಗೂರಿನಲ್ಲಿ ಕರಿಯಪ್ಪ ಹಾಗೂ ವೀರಮ್ಮ ಅವರ ಸ್ಮಾರಕ ಮೂರ್ತಿ ಹಾಗೂ ಮ್ಯೂಸಿಯಂ ನಿರ್ಮಿಸಬೇಕು. ಸಂಗೂರು ಕರಿಯಪ್ಪ ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ರಚನೆ ಮಾಡಬೇಕು. ಸಂಗೂರಿನಲ್ಲಿರುವ ಮಹಾತ್ಮಾ ಗಾಂಧೀಜಿ ಚಿತಾಭಸ್ಮವನ್ನು ದೆಹಲಿಯ ರಾಜಘಾಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಇಂದಿನ ವಿದ್ಯಾರ್ಥಿ-ಯುವಜನರಿಗೆ ಸಂಗೂರು ಕರಿಯಪ್ಪ ಸೇರಿದಂತೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಇತಿಹಾಸದ ಜಾಗೃತಿ ಮೂಡಿಸಲು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂಬರುವ ಬಜೆಟ್ ನಲ್ಲಿ ಕ್ರಮ ಕೈಗೊಂಡು ಘೋಷಿಸುವಂತೆ ಒತ್ತಾಯಿಸಿದರು.

ಬ್ರಿಟಿಷರ ಹಿಡಿತದಿಂದ ಭಾರತದ ವಿಮೋಚನೆಗಾಗಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಅಪ್ರತಿಮವಾಗಿ ಹೋರಾಡಿದವರಲ್ಲಿ ನಮ್ಮ ತಂದೆ, ತಾಯಿಯವರಾದ ಸಂಗೂರು ಕರಿಯಪ್ಪ ಹಾಗೂ ವೀರಮ್ಮನವರು ಪ್ರಮುಖರಾಗಿದ್ದಾರೆ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸ್ವಾತಂತ್ರ್ಯ ಭಾರತ ಕಟ್ಟಲು ತಮ್ಮ ಪ್ರಾಣ ಪಣಕಿಟ್ಟು ಹೋರಾಡಿದ ಚೇತನಗಳನ್ನು ಸದಾ ಗೌರವ ಭಾವದೊಂದಿಗೆ ನಾವೆಲ್ಲರೂ ಸ್ಮರಿಸಬೇಕಿದೆ. ತಮ್ಮ ವೈಯಕ್ತಿಕ ಬದುಕಿನ ಹಿತಾಸಕ್ತಿ ಬದಿಗೊತ್ತಿ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸವೆಸಿದ ಅಮರ ಚೇತನ ಸಂಗೂರು ಕರಿಯಪ್ಪನವರಿಗೆ ಹಾಗೂ ಅವರ ಸಂಗಾತಿಗಳಿಗೆ ಗೌರವ ಸಲ್ಲಿಸುವ ಕೆಲಸ ನಡೆಸುವ ನಿಟ್ಟಿನಲ್ಲಿ ಸರಕಾರ ಕಾರ್ಯಯೋಜನೆಯನ್ನು ಜಾರಿಗೆ ತರುವಂತೆ ಈ ಹಿಂದೆಯೂ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕಾರ್ಯರೂಪಕ್ಕೆ ತರದಿರುವುದು ಬೇಸರ ತರಿಸಿದೆ ಎಂದರು.

ಮನವಿ ಸ್ವೀಕರಿಸಿದ ಶಾಸಕ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣನವರ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೇ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ್ ಎಸ್., ಪುಷ್ಪಾ ಎರೇಸೀಮಿ, ತಿರಕವ್ವ ಎರೇಸೀಮಿ, ಪ್ರದೀಪ ಕುರಿ, ಸಂತೋಷ ಕೂರಗುಂದ, ವೀರೇಶ ಬಿಂಗಾಪೂರ ಇತರರಿದ್ದರು.

Share this article