ಕನ್ನಡಪ್ರಭ ವಾರ್ತೆ ವಿಜಯಪುರ
ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಗೀತಾ.ಎಚ್ ಮಾತನಾಡಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ಕೊನೆಗೊಳಿಸುವ ಸಲುವಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿದೆ. ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ, ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ, ಅಪೌಷ್ಟಿಕತೆ, ಅಭದ್ರತೆ, ಕೌಟುಂಬಿಕ ದೌರ್ಜನ್ಯದಂತಹ ಹಲವಾರು ಸಮಸ್ಯೆಗಳ ವಿರುದ್ಧ ಎಲ್ಲ ಸ್ತರದ ಮಹಿಳೆಯರನ್ನು ಸಂಘಟಿಸುತ್ತಿದೆ. ಕರ್ನಾಟಕದಲ್ಲೂ ಕೂಡಾ ಈ ಎಲ್ಲ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹಲವಾರು ಹೋರಾಟಗಳನ್ನು ಕಟ್ಟುತ್ತ, 2025 ನವೆಂಬರ್ 25 ರಿಂದ 2026 ಮಾರ್ಚ್ 25ರ ವರೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಸಹಿ ಸಂಗ್ರಹಣಾ ಅಭಿಯಾನವನ್ನು ಎಐಎಮ್ ಎಸ್ ಎಸ್ ರಾಜ್ಯ ಸಮಿತಿ ಕೈಗೆತ್ತಿಕೊಂಡಿತ್ತು. ಈ ಹೋರಾಟಕ್ಕೆ ಸ್ಪಂದಿಸಿದ ರಾಜ್ಯದ ಸುಚಿಂತಕರು, ಪ್ರಗತಿಪರರು, ಎಲ್ಲ ವಯೋಮಾನದ ಎಲ್ಲ ವರ್ಗದ ಜನತೆಯು ಮುಂದಿಟ್ಟ ತಮ್ಮ ಮನ:ಪೂರ್ವ ಆಶಯ ಮತ್ತು ಒತ್ತಾಸೆಗೆ ಸ್ಪಂದಿಸಿ ಸರ್ಕಾರ ಕೆಲವು ಕಾರ್ಯ ಸೂಚಿಗಳನ್ನು ಮಾಡಿದೆ. ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಇವ ನಮ್ಮವ ಕಾಯ್ದೆಯನ್ನು ಜಾರಿಗೊಳಿಸಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿದ ಕ್ರಮಗಳು ಸ್ವಾಗತಾರ್ಹವಾಗಿದ್ದು, ಇದು ಜನಾಭಿಪ್ರಾಯಕ್ಕೆ ಸಂದ ಜಯ ಎಂದರು.ಕಾರ್ಯದರ್ಶಿ ಶಿವಬಾಳಮ್ಮ ಕೊಂಡುಗುಳಿ ಮಾತನಾಡಿ, ಈ ಕಾನೂನುಗಳು ಪರಿಣಾಮಕಾರಿಯಾಗಿ ತಳಮಟ್ಟದವರೆಗೂ ಕಾರ್ಯನಿರ್ವಹಿಸುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಐಎಂ ಎಸ್ ಎಸ್ ಮನವಿ ಮಾಡುತ್ತದೆ. ಇಂದು ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಜ್ಞಾನ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಇಂದಿಗೂ ಪೂರ್ಣವಾಗಿ ಪ್ರಜಾತಾಂತ್ರಿಕವಾಗಿಲ್ಲ. ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ. ಇವೆಲ್ಲವೂ ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.ಈ ವೇಳೆ ಜಂಟಿಕಾರ್ಯದರ್ಶಿ ಶಿವರಂಜಿನಿ, ಸದಸ್ಯೆ ಪವಿತ್ರ, ಚಾಂದ್‌ಬಿ ಸೇರಿದಂತೆ ಇತರರು ಭಾಗವಹಿಸಿದ್ದರು.