ಸಮಗ್ರ ನೀರಾವರಿಗಾಗಿ ವಿಶೇಷ ಅಧಿವೇಶನಕ್ಕೆ ಆಗ್ರಹ

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ವಿಜಯಪುರದಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಅಖಂಡ ಕರ್ನಾಟಕ ರೈತ ಸಂಘದ ಒತ್ತಾಯ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಯಲ್ಲಿ 5 ನದಿಗಳು ಹರಿದು ಪಂಚ ನದಿಗಳ ಬೀಡು ಎಂದು ಹೇಳಿಕೊಳ್ಳಲು ಮಾತ್ರ ಸೀಮಿತವಾಗಿದೆ. ಆದರೆ ಸಮಗ್ರ ನೀರಾವರಿಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ರೈತರ ಹಿತದೃಷ್ಟಿಯಿಂದ ಸರ್ಕಾರ ಸಮಗ್ರ ನೀರಾವರಿಗಾಗಿ ಪ್ರತ್ಯೇಕ ವಿಶೇಷ ಅಧಿವೇಶನವನ್ನು ವಿಜಯಪುರದಲ್ಲಿ ನಡೆಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.

ಸಮಗ್ರ ನೀರಾವರಿಗಾಗಿ ಪ್ರತ್ಯೇಕ ವಿಶೇಷ ಅಧಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ೫೨೪.೨೫೬ಕ್ಕೆ ನಿಲ್ಲಿಸಲು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ ೨ನೇ ನ್ಯಾಯಾಧಿಕರಣವು ೨೦೧೦ರಲ್ಲಿ ತೀರ್ಪು ನೀಡಿತ್ತು. ೨೦೧೩ರಲ್ಲಿ ಅಂತಿಮ ತೀರ್ಪು ನೀಡಿದ್ದು, ಇಲ್ಲಿಯವರೆಗೂ ಜಲಾಶಯದ ನೀರಿನಮಟ್ಟ ಎತ್ತರಿಸಲು ಇನ್ನೂ ಗೇಟ್ ಅಳವಡಿಸಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆ ಇನ್ನೂ ಸಂಪೂರ್ಣ ನೀರಾವರಿಗೆ ಒಳಪಟ್ಟಿಲ್ಲ. ಕೆಲವು ಸಲ ಬೇಸಿಗೆ ವೇಳೆ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತದೆ ಎಂದು ದೂರಿದರು.

ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಿದರೆ ಇನ್ನೂ ಅಂದಾಜು ೨೦ ರಿಂದ ೨೨ ಹಳ್ಳಿಗಳು ಬಾಧಿತಗೊಳ್ಳುತ್ತವೆ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೆರ್ ಜಮೀನು ಮುಳುಗಡೆ ಹೊಂದುತ್ತವೆ. ಇವೆಲ್ಲವುಗಳಿಗೆ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಹಾಗೂ ಜಮೀನುಗಳ ಪರಿಹಾರಕ್ಕೆ ಅಂದಾಜು ₹೭೫ ಸಾವಿರ ಕೋಟಿಯಿಂದ ₹೧ ಲಕ್ಷ ಕೋಟಿ ವರೆಗೆ ಬೇಕು. ಹಿಂದಿನ ಅಧಿವೇಶನದಲ್ಲೂ ಸರ್ಕಾರ ಆಲಮಟ್ಟಿ ಜಲಾಶಯದ ಕುರಿತು ಯಾವ ಶಾಸಕರು, ಸಚಿವರು ಮಾತಾಡಲಿಲ್ಲ. ಹೀಗಾಗಿ ಜಿಲ್ಲೆಯ ರೈತರು ಹತಾಶರಾಗಿದ್ದಾರೆ. ಇನ್ನು ಮುಂದಾದರೂ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ವಿಶೇಷ ಅಧಿವೇಶ ವಿಜಯಪುರ ನಗರದಲ್ಲಿ ನಡೆಸಿ ನೀರಾವರಿ ಕುರಿತು ಸಮಗ್ರ ಚರ್ಚಿಸಿ ನ್ಯಾಯಾಧೀಕರಣ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು. ವಿಜಯಪುರದಲ್ಲಿ ವಿಶೇಷ ಅಧಿವೇಶನ ನಡೆಸಿದರೆ ಜಿಲ್ಲೆಯ ಶಾಸಕರು, ಸಚಿವರು ಅನಿವಾರ್ಯವಾಗಿ ವಿಷಯ ಪ್ರಸ್ತಾಪ ಮಾಡಲೇಬೇಕಾಗುತ್ತದೆ ಎಂದರು.

ರಾಜ್ಯದ ರೈತರಿಗೆ ಸಬ್ಸಿಡಿ ರೀತಿಯಲ್ಲಿ ಸಮರ್ಪಕವಾಗಿ ಸ್ಪ್ರಿಂಕ್ಲರ್ ಸೆಟ್‌ಗಳನ್ನು ಕೊರತೆಯಾಗದಂತೆ ಪೂರೈಸಬೇಕು. ಹಿಂದಿನ ಸರ್ಕಾರದವಧಿಯಲ್ಲಿ ಸ್ಪ್ರಿಂಕ್ಲರ್ ಉಪಕರಣಗಳನ್ನು ಸರಿಯಾಗಿ ಸರಬರಾಜು ಮಾಡದಿರುವುದರಿಂದ ಬಹುತೇಕ ರೈತರಿಗೆ ಉಪಕರಣಗಳು ಲಭ್ಯವಾಗಿಲ್ಲ. ಒಂದೊಂದು ಜಿಲ್ಲೆಗೆ ಪ.ಜಾ, ಪ.ಪಂ ಹಾಗೂ ಸಾಮಾನ್ಯ ರೈತರು ಎಲ್ಲ ಸೇರಿದರೂ ಕೇವಲ ೧೦ ಸಾವಿರ ಸ್ಪ್ರಿಂಕ್ಲರ್ ಸೆಟ್ಟುಗಳನ್ನು ಪ್ರತಿಯೊಂದು ಜಿಲ್ಲೆಗೆ ಪೂರೈಸಿದ್ದಾರೆ. ಇದೇ ರೀತಿ ನಮ್ಮ ಜಿಲ್ಲೆಗೂ ೧೦ ಸಾವಿರ ಸೆಟ್ಟುಗಳನ್ನು ಪೂರೈಸಿದ್ದಾರೆ. ಅತೀ ಕಡಿಮೆ ಸ್ಪ್ರಿಂಕರ್ ಸೆಟ್ಟುಗಳನ್ನು ಪೂರೈಸಿದ್ದರಿಂದ ಒಬ್ಬರಿಗೆ ಸಿಕ್ಕಿತ್ತು ಇನ್ನೊಬ್ಬ ರೈತರಿಗೆ ಸಿಕ್ಕಿಲ್ಲ ಎಂಬಂತಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ರೈತರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಅಗತ್ಯವಿರುವಷ್ಟು ಸ್ಪ್ರಿಂಕ್ಲರ್ ಸೆಟ್ಟುಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾ.ಉಪಾಧ್ಯಕ್ಷರು ಬ.ಬಾಗೇವಾಡಿ ಹೊನಕೇರೆಪ್ಪ ತೆಲಗಿ, ತಾಲೂಕು ಕಾರ್ಯಾಧ್ಯಕ್ಷರು ಸೋಮನಗೌಡ ಪಾಟೀಲ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮುಂಡಗನೂರ, ನಂದುಗೌಡ ಬಿರಾದಾರ, ಗುರಲಿಂಗಪ್ಪ ಪಡಸಲಗಿ, ದಾವಲಸಾಬ ನದಾಫ, ಬಸಯ್ಯಮಠ, ರಾಮನಗೌಡ ಹಾದಿಮನಿ, ಶಿವರಾಜ ಬಿರಾದಾರ, ಬಸನಗೌಡ ಪಾಟೀಲ, ಅಪ್ಪಾಸಾಹೇಬಗೌಡ ಕೋಳೂರ, ಮಲ್ಲಿಕಾರ್ಜುನ ನಾವಿ ಸೇರಿ ಮುಂತಾದವರು ಇದ್ದರು.

Share this article