ಸಕಾಲಕ್ಕೆ ಕೂಲಿ ಹಣ ಪಾವತಿಸುವಂತೆ ಆಗ್ರಹ

KannadaprabhaNewsNetwork | Published : Mar 15, 2024 1:20 AM

ಸಾರಾಂಶ

ಕೂಲಿ ಹಣ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಬುಧವಾರ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದಕ್ಕೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಯಾಗದೆ ಇರುವುದರಿಂದ ಕೂಲಿಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೂಲಿ ಹಣ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಬುಧವಾರ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯವು ತೀವ್ರ ಬರಗಾಲ ಎದುರಿಸುತ್ತಿದ್ದು, ಈ ವೇಳೆ ರಾಜ್ಯದಲ್ಲಿ ಕೂಡಲೇ ನರೇಗಾ ಕೂಲಿ ಕೆಲಸದ ದಿನಗಳನ್ನು 100 ಬದಲಾಗಿ 200 ದಿನಗಳಿಗೆ ಹೆಚ್ಚಿಸಬೇಕು. ಬರಗಾಲದ ವೇಳೆ ಕೂಲಿಕಾರರಿಗೆ ಕೂಲಿ ಹಣವನ್ನ ಕನಿಷ್ಠ ₹600ಗೆ ಹೆಚ್ಚಿಸಬೇಕು. ರೈತ ಕೂಲಿಕಾರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ಕೂಲಿ ವೇತನವನ್ನು ಸಂದಾಯ ಮಾಡಬೇಕು. ಕೂಲಿಕಾರರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು.

ಕೂಲಿಕಾರರ ಸಾಲ ಮನ್ನಾ ಮಾಡಬೇಕು. ಮೈಕ್ರೋಫೈನಾನ್ಸ್ ಮೂಲಕ ಪಡೆದ ಸಾಲಮನ್ನಾ ಮಾಡಬೇಕು. ವಲಸೆ ಕಾರ್ಮಿಕರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬರಗಾಲದಲ್ಲಿ ಶುದ್ಧ ಕುಡಿಯುವ ನೀರಿಗೆ ಹಾಗೂ ಜಾನುವಾರಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬರದ ವೇಳೆ ಯಂತ್ರಗಳ ಬಳಕೆ ನಿಲ್ಲಿಸಿ ಕೂಲಿಕಾರರಿಗೆ ಕೆಲಸ ಕೊಡಬೇಕು ಆಗ್ರಹಿಸಿ ಸಂಘದಿಂದ ನಗರದ ಡಿಸಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘಟನೆ ಮುಖಂಡರಾದ ಚಂದ್ರಪ್ಪ ಹೊಸಕೇರಾ, ಬಸವರಾಜ ಮರಕುಂಬಿ, ಸುಂಕಪ್ಪ ಗದಗ್, ಹುಸೇನಪ್ಪ ಕೆ., ಮರಿನಾಗಪ್ಪ ಡಗ್ಗಿ, ಯಲ್ಲಪ್ಪ ಸಿಂಗನಾಳ, ಬಸವರಾಜ ಮೇಳಿ, ಬಸವರಾಜ ಬಿಜಿಕಲ್, ಹುಲ್ಲೇಶ್ ಮರಕುಂಬಿ, ರೇಣುಕಮ್ಮ ಭೀಮನೂರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Share this article