ಹಿರೇಕೆರೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ರೇಣುಕಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.
ಮಾರ್ಚ್ 3ರಂದು ಹೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿತ್ತು. ರೈತರ ಸಮಸ್ಯೆಗಳಿಗೆ ತಿಂಗಳೊಳಗಾಗಿ ಎಲ್‌ಟಿ ಲೈನ್ ಮತ್ತು ಟಿಸಿಗಳನ್ನು ಮಾಡಿಸಿಕೊಡುತ್ತೇವೆ ಹಾಗೂ ಹೆಚ್ಚುವರಿ ಓವರ್ ಲೋಡ್ ಆದ ಟಿ.ಸಿ.ಗಳನ್ನು ಪರಿವರ್ತನೆ ಮಾಡಿ ತಿಂಗಳೊಳಗೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದ್ದರೂ ಈ ವರೆಗೆ ಯಾವುದೇ ಕೆಲಸ ಆಗಿಲ್ಲ. ಕಾರಣ ರೈತರು ಮಳೆ ಬಂದರೆ ಬಿತ್ತನೆಯ ಸಮಯದಲ್ಲಿ ಕೆಲಸ ಮಾಡಲು ಬರುವುದಿಲ್ಲ. ಒಂದು ವಾರದ ಒಳಗಾಗಿ ಈ ಎಲ್ಲ ಕೆಲಸಗಳನ್ನು ಮುಗಿಸದಿದ್ದರೆ ಮತ್ತೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗೀಕರಣವನ್ನು ಮಾಡಲು ಹೊರಟಿದ್ದು, ಕರ್ನಾಟಕದ 19 ಜಿಲ್ಲೆಗಳ ವಿದ್ಯುತ್ ವಿತರಣೆಯನ್ನು ಟಾಟಾ ಕಂಪನಿಗೆ ಕೊಡಲು ತೀರ್ಮಾನಿಸಿದೆ. ಇದರಿಂದ ತಾಲೂಕಿನ ರೈತರ ಪಂಪ್ ಸೆಟ್‌ಗಳನ್ನು ನಡೆಸುವುದು ಅಸಾಧ್ಯ. ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸುವ ಹುನ್ನಾರ ನಡೆಸಿದ್ದು, ರೈತರ ಹಿತದೃಷ್ಟಿಯಿಂದ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಿಸಿರುವುದರಿಂದ ರೈತರು ಡೀಸೆಲ್ ಸಿಗದೆ ಪರದಾಡುತ್ತಿದ್ದು, ದರ ಕಡಿಮೆ ಮಾಡುವುದರ ಜತೆಗೆ ಸಮರ್ಪಕ ವಿತರಣೆ ಮಾಡಬೇಕು. ಭೂ ಮಾಪನ ಇಲಾಖೆಯಲ್ಲಿ ಲೈಸೆನ್ಸ್ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ವಾಟ್ನಿ ನಕ್ಷೆ, ಖರೀದಿ ನಕ್ಷೆ ರೈತರು ತುಂಬಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು. ಕಚೇರಿ ಕೆಲಸ ಪ್ರಾರಂಭ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಈರಪ್ಪ ಮಾಳೂರು, ಶಾಂತನಗೌಡ ಪಾಟೀಲ, ಯಶವಂತ ತಿಮಕಾಪೂರ ಸೇರಿ ವಿವಿಧ ಗ್ರಾಮಗಳ ರೈತರಿದ್ದರು.