ಹಿರಿಯೂರು: ರಸ್ತೆ ನಿರ್ಮಾಣಕ್ಕೆ ಗುಣಮಟ್ಟದ ಮಣ್ಣು ಬಳಕೆಗೆ ಆಗ್ರಹ

KannadaprabhaNewsNetwork | Updated : Jan 16 2024, 03:57 PM IST

ಸಾರಾಂಶ

ನೂರಾರು ಕೋಟಿ ರು.ಅನುದಾನದ ಬೀದರ್ - ಶ್ರೀರಂಗಪಟ್ಟಣ ರಸ್ತೆ ಕಾಮಗಾರಿಗೆ ಸುರಿಯುತ್ತಿರುವ ಮಣ್ಣು ಮತ್ತು ಕಲ್ಲು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿರುವ ರೈತಸಂಘ ಪಿಎನ್‌ಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ದಶಕಗಳ ಕಾಲ ಗಟ್ಟಿಮುಟ್ಟಾಗಿ ಉಳಿಯಬೇಕಾದ ರಸ್ತೆಗಳು ಗುಣಮಟ್ಟವಿರದ ಕಪ್ಪು ಮಣ್ಣು ಮತ್ತು, ದೊಡ್ಡದೊಡ್ಡ ಕಲ್ಲುಗಳಿಂದ ಅವೈಜ್ಞಾನಿಕವಾಗಿ ನಿರ್ಮಾಣ ವಾಗುತ್ತಿದೆ ಎಂದು ಬೀದರ್ - ಶ್ರೀರಂಗಪಟ್ಟಣ ರಸ್ತೆಯ ಕಳಪೆ ಕಾಮಗಾರಿ ಕುರಿತು ಸಾರ್ವಜನಿಕರ ಆರೋಪದೊಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.

ನಗರದ ಹೊರವಲಯದಲ್ಲಿ ಹಾದು ಹೋಗುವ ಬೀದರ್ - ಶ್ರೀರಂಗಪಟ್ಟಣ ರಸ್ತೆಯಲ್ಲಿನ ಯರಬಳ್ಳಿಯಿಂದ ಹುಲಗಲಕುಂಟೆವರೆಗೂ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಹರ್ತಿಕೋಟೆ ಫ್ಲೈ ಓವರ್, 103 ಕ್ರಾಸ್ ಬಳಿ ಕಪ್ಪು ಮಣ್ಣು ತಂದು ಸುರಿಯಲಾಗುತ್ತಿದೆ ಎಂದು ಒಂದರ ಹಿಂದೊಂದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ನೂರಾರು ಕೋಟಿ ರು.ಅನುದಾನದ ರಸ್ತೆ ಕಾಮಗಾರಿಗೆ ಸುರಿಯುತ್ತಿರುವ ಮಣ್ಣು ಮತ್ತು ಕಲ್ಲಿನ ಪ್ರಮಾಣದ ಬಗ್ಗೆಯೂ ಪ್ರಶ್ನೆಗಳೆದ್ದಿವೆ. ಇದಕ್ಕೆ ಪುಷ್ಠಿ ನೀಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಿಎನ್‌ಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಪಿಎನ್ ಸಿ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಕಾಮಗಾರಿಯಲ್ಲಿನ ಎರೆ ಮಣ್ಣನ್ನು ರಸ್ತೆ ಮತ್ತು ಸರ್ವಿಸ್ ರಸ್ತೆಗೆ ತಂದು ಸುರಿಯುತ್ತಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ರಸ್ತೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡುತ್ತಿರುವ ಮಣ್ಣಿನ ಗುಣಮಟ್ಟದ ಸತ್ಯಾಸತ್ಯತೆ ಪರಿಶೀಲಿಸಿ, ಸಂಬಂಧಪಟ್ಟ ಗುತ್ತಿಗೆ ಪಡೆದ ಕಂಪನಿ ಯ ಮೇಲೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

ಈ ಹಿಂದೆ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ರಾ.ಹೆ.150 ಎ ರಸ್ತೆ ಕಾಮಗಾರಿಗೆ ಕೆರೆ ಮಣ್ಣು ಮತ್ತು ಕಳಪೆ ಗುಣಮಟ್ಟದ ಮಣ್ಣು ಬಳಕೆ ಸಾಗಾಣಿಕೆ ಮಾಡುವುದನ್ನು ನಿಷೇಧಿಸಬೇಕು. 

ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ಣಯಿಸಿ ಸೂಚಿಸಿದ್ದರು. ಆದರೂ ಸಹ ಈ ರೀತಿ ದಪ್ಪ ಗಾತ್ರದ ಕಲ್ಲು ಮತ್ತು ಎರೆ ಮಣ್ಣಿನ ಹೆಂಡೆಗಳ ಮಿಶ್ರಿತ ಯೋಗ್ಯವಲ್ಲದ ಕಳಪೆ ಮಣ್ಣು ಬಳಕೆ ಮಾಡಲಾಗುತ್ತಿದ್ದು ಸಂಬಂಧಪಟ್ಟ ಜಿಲ್ಲಾಧಿ ಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತಪ್ಪಿಸಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸು ವಂತೆ ರೈತ ಸಂಘ ಒತ್ತಾಯಿಸಿದೆ.

ಮಣ್ಣಿನ ಗುಣಮಟ್ಟ ಖಾತ್ರಿಯಾಗಲಿ: ಯರಬಳ್ಳಿಯಿಂದ ಹುಲಗಲಕುಂಟೆಯವರೆಗಿನ 20 ಕಿ.ಮೀ. ರಸ್ತೆ ಕಾಮಗಾರಿಯಲ್ಲಿ ಈಗಾಗಲೇ ಮಣ್ಣು ಸಾಗಾಟದ ಅಪರಾತಪರಾಗಳು ಸಾಕಷ್ಟು ನಡೆದು ಹೋಗಿವೆ. ಸರ್ಕಾರಿ ಗೋ ಮಾಳ, ಅರಣ್ಯ ವ್ಯಾಪ್ತಿಯ ಮಣ್ಣನ್ನು ಸಹ ನಿಯಮಬಾಹಿರವಾಗಿ ರಸ್ತೆಗೆ ಸಾಗಿಸಲಾಗಿದೆ ಎಂದು ಸಾಕಷ್ಟು ಪ್ರತಿಭಟನೆಗಳೇ ನಡೆದಿದ್ದವು. 

ದಶಕಗಳ ಕಾಲ ಬಾಳಿಕೆ ಬರಬೇಕಾದ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕಿದ್ದ ಬಹು ಮುಖ್ಯ ಕಾಮಗಾರಿಗಳೇ ಹೀಗಾದರೆ ಹೇಗೆ? ರಸ್ತೆಗೆ ಬಳಸುವ ಮಣ್ಣನ್ನು ಲ್ಯಾಬ್ ಟೆಸ್ಟಿಂಗ್ ಗೆ ಕೊಟ್ಟು ಅದರ ಕ್ವಾಲಿಟಿ ಪರೀಕ್ಷಿಸಿ ಅದು ರಸ್ತೆ ನಿರ್ಮಾಣಕ್ಕೆ ಯೋಗ್ಯವೇ ಎಂದು ಪರೀಕ್ಷಿಸಿ ಹೇಳಬೇಕಾದವರು ದಾರಿ ತಪ್ಪಿದರಾ ಎಂಬ ಪ್ರಶ್ನೆಗೆ ಉತ್ತರಿಸುವವರಾರು ಎಂಬ ಸಾರ್ವಜನಿಕರ ಪ್ರಶ್ನೆ ಹಾಗೇ ಉಳಿದಿದೆ.

Share this article