ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದ ಇಡೀ ನ್ಯಾಯಾಂಗ ವ್ಯವಸ್ಥೆ ಪ್ರಶ್ನಿಸುವಂತೆ, ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯನವರನ್ನು ಪರಿಷತ್ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೇಲ್ಮನೆ ಸಭಾಪತಿಗೆ ಬಿಜೆಪಿ ಕಾನೂನು ಪ್ರಕೋಷ್ಟ ಒತ್ತಾಯಿಸಿದೆ.ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಯತೀಂದ್ರ ಸಿದ್ದರಾಮಯ್ಯ ವಿಪಕ್ಷದವರು ಕಾನೂನು ಮೀರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು, ಸುಳ್ಳು ಸುಳ್ಳು ಆರೋಪಗಳನ್ನು ಹೊರಿಸಿ, ಸುಳ್ಳನ್ನು ಸತ್ಯವೆಂದು ಸಾಬೀತುಪಡಿಸಲು ಹೊರಟಿದ್ದಾರೆ ಎಂಬ ಆರೋಪ ಮಾಡಿದ್ದರು ಎಂದು ಬಿಜೆಪಿ ವಕೀಲರ ಪ್ರಕೋಷ್ಟದ ಮುಖಂಡ, ಹಿರಿಯ ವಕೀಲ ದಿವಾಕರ ಸಭಾಪತಿಯವರಿಗೆ ಒತ್ತಾಯಿಸಿದ್ದಾರೆ.
ಐಟಿ, ಇಡಿ, ಸಿಬಿಐ ಸೇರಿ ಎಲ್ಲಾ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿವೆ. ಕೇಂದ್ರ ಸರ್ಕಾರ ಏನು ಹೇಳುತ್ತದೋ ಅದೇ ರೀತಿ ಅವು ತನಿಖೆ ಮಾಡುತ್ತಿವೆ. ಇವತ್ತು ಎಷ್ಟೋ ಸಂದರ್ಭಗಳಲ್ಲಿ ಕೋರ್ಟ್‌ಗಳು ಸಹ ಕೇಂದ್ರ ಸರ್ಕಾರ ಹೇಳುವ ರೀತಿಯಲ್ಲಿ ಕೆಲಸ ಮಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆಯಾಗಿದೆ. ಹಾಗಾಗಿ ಮಾನ್ಯ ಸಭಾಪತಿಗಳು ವಿಧಾನ ಪರಿಷತ್ ಸದಸ್ಯತ್ವದಿಂದ ಯತೀಂದ್ರ ಸಿದ್ದರಾಮಯ್ಯನವರನ್ನು ವಜಾ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ, ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಎಚ್.ದಿವಾಕರ, ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ ಮೊಹರೆ, ಸಹ ಸಂಚಾಲಕ ಕೆ.ಎಚ್.ಧನಂಜಯ ಇತರರು ಮೇಲ್ಮನೆ ಸಭಾಪತಿ ಅವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.