ಜಮೀರ್ ಅಹಮದ್‌ಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ

KannadaprabhaNewsNetwork |  
Published : Jun 07, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದ ಮುಖಂಡರು ಶನಿವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಮೀರ್ ಅಹ್ಮದ್ ಖಾನ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರ ಮೂಲಕ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಂತೆ ಆಗ್ರಹಿಸಿ ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಡೆ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಎಲ್ಲಾ ವರ್ಗ, ಎಲ್ಲಾ ಸಮುದಾಯಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಪಕ್ಷವಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಮಹತ್ತರವಾಗಿದೆ. ನೂತನ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಶಾಸಕರಿಗೆ ಸಮರ್ಪಕ ಮತ್ತು ನ್ಯಾಯಯುತ ಪ್ರಾತಿನಿಧ್ಯ ನೀಡದೆ ಉದಾಸೀನ ತೋರಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಶಾಸಕ ಜಮೀರ್ ಅಹ್ಮದ್ ಖಾನ್ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶದ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತ ಸಮುದಾಯವು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಮೌಲ್ಯಗಳು ಹಾಗೂ ಚುನಾವಣಾ ಗೆಲುವುಗಳಲ್ಲಿ ನಿರಂತರವಾಗಿ ಮಹತ್ವದ ಪಾತ್ರವನ್ನು ವಹಿಸಿದೆ. ಸಚಿವ ಸಂಪುಟದಲ್ಲಿ ಅವರ ಜನಸಂಖ್ಯೆ, ರಾಜಕೀಯ ಕೊಡುಗೆ ಹಾಗೂ ಸಾಮಾಜಿಕ ಪ್ರಾತಿನಿಧ್ಯವನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡುವುದು ಅತ್ಯಗತ್ಯವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಲ್ಪಸಂಖ್ಯಾತ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಿಡುಗಡೆ ಮಾಡಲಾದ ಆಡಿಯೋ ಸಂಪೂರ್ಣ ಸುಳ್ಳು. ಜಮೀರ್ ಅಹ್ಮದ್ ಖಾನ್ ರವರಿಗೆ ಡಿಸಿಎಂ ಸ್ಥಾನ ತಪ್ಪಿಸಲು ಮಾಡಿದ ಕುತಂತ್ರ ಅದಾಗಿದೆ. ಈ ಆಡಿಯೋವನ್ನು ಮೊದಲು ಬಿಡುಗಡೆ ಮಾಡದೆ ಚುನಾವಣೆ ವೇಳೆ ಯಾಕೆ ವೈರಲ್ ಮಾಡಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಆಡಿಯೋ ಎಂದರು.

ಮುಂದಿನ ದಿನಗಳಲ್ಲಿ ಹೈಕಮಾಂಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ಜೊತೆಗೆ ಡಿಸಿಎಂ ಮಾಡಲೇಬೇಕು. ಇಲ್ಲದಿದ್ದರೆ ಅಲ್ಪಸಂಖ್ಯಾತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ರಾಜ್ಯ ವಕ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಭಾಷಾ, ಮುಸ್ಲಿಂ ಹಾಸ್ಟೆಲ್ ಅಧ್ಯಕ್ಷ ಹಾಜಿ ನಯಾಜ್, ಕಾಂಗ್ರೆಸ್ ಮುಖಂಡರಾದ ಸಯ್ಯದ್ ಅನಿಸ್, ನಗರಸಭೆ ಮಾಜಿ ಸದಸ್ಯ ಸರ್ದಾರ್ ಅಹಮದ್ ಪಾಷಾ, ಹಿರಿಯ ವಕೀಲ ಸಾಧಿಕ್ ಉಲ್ಲಾ, ದಲಿತ ಮುಖಂಡರಾದ ಬಾಳೆಕಾಯಿ ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಖುದ್ದೂಸ್, ಅಗಸನಕಲ್ಲು ಮುತ್ವಲ್ಲಿ ದಾದಾಪೀರ್, ಸ್ಲಂ ಬೋರ್ಡ್ ಸದಸ್ಯ ರಶೀದ್, ಅನ್ವರ್, ನಗರಸಭೆ ಸದಸ್ಯ ದಾವೂದ್ , ಗೊಪ್ಪೆ ಮಂಜುನಾಥ್ , ಮಸೀದಿ ಕಾರ್ಯದರ್ಶಿ ಮುಹಿಬುಲ್ಲ, ಮುತ್ತುವಲ್ಲಿ ಸಾಧಿಕ್ ಉಲ್ಲಾ, ಇರ್ಫಾನ್, ಈಜಾಜ್, ನಿಜಾಂ, ಯೂಸುಫ್, ಅಕ್ರಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಹೋರಾಡಿ: ನ್ಯಾ.ಎಲ್‌.ನಾರಾಯಣಸ್ವಾಮಿ
ಮಂಜಪ್ಪನವರ ನಿಸ್ಪೃಹ ಸೇವೆ ಅನುಕರಣೀಯ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ