ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು

KannadaprabhaNewsNetwork | Published : Aug 24, 2024 1:21 AM

ಸಾರಾಂಶ

ಮೈಸೂರು ಭಾಗದಲ್ಲಿ ಡಿ. ದೇವರಾಜ ಅರಸು ಅವರನ್ನು ಬಿಟ್ಟರೆ, ಮುಖ್ಯಮಂತ್ರಿ ಸ್ಥಾನ ಸಿಗಲು ಮೈಸೂರಿನ ಜನತೆ 33 ವರ್ಷ ಕಾಯಬೇಕಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಹಿತದೃಷ್ಟಿಯಿಂದ ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಮುಂದುವರಿಯಬೇಕು ಎಂದು ಹೊಟೇಲ್‌ ಮಾಲೀಕರ ಸಂಘ ಆಗ್ರಹಿಸಿದೆ.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಅವರು, ಮೈಸೂರು ಭಾಗದಲ್ಲಿ ಡಿ. ದೇವರಾಜ ಅರಸು ಅವರನ್ನು ಬಿಟ್ಟರೆ, ಮುಖ್ಯಮಂತ್ರಿ ಸ್ಥಾನ ಸಿಗಲು ಮೈಸೂರಿನ ಜನತೆ 33 ವರ್ಷ ಕಾಯಬೇಕಾಯಿತು. ಮೊದಲ ಅವಧಿ ನಂತರ ಎರಡನೇ ಅವಧಿಗೆ ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರು ಮೈಸೂರು ಭಾಗಕ್ಕೆ ಅನೇಕ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮೈಸೂರು ಭಾಗದಿಂದ ಮುಖ್ಯಮಂತ್ರಿಗಳಾಗಿದ್ದರಿಂದಲೇ ಅವರು ತವರು ಜಿಲ್ಲೆ ಮೈಸೂರಿಗೆ ಏನಾದರೂ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಸದಾ ನೆನಪಿಡುವ ಕಾರ್ಯಕ್ರಮ ನೀಡುತ್ತಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯವಾಗಿ, ಜನಮನದಲ್ಲಿ ಶಾಶ್ವತವಾಗಿ ಉಳಿಯುವ ಜಯದೇವ ಟ್ರಾಮಾ ಸೆಂಟರ್‌, ಜಿಲ್ಲಾ ಆಸ್ಪತ್ರೆ, ಪಂಚಕರ್ಮ ಆಯುರ್ವೇದ ಆಸ್ಪತ್ರೆ, ಮಹಾರಾಣಿ ಕಾಲೇಜು, ಹೊಸ ಜಿಲ್ಲಾಧಿಕಾರಿ ಕಚೇರಿ, ಚಾಮುಂಡಿಬೆಟ್ಟದ ಬಹುಮಹಡಿ ವಾಹನ ನಿಲ್ದಾಣ, ಚಾಮರಾಜ, ಸಯ್ಯಾಜಿರಾವ್‌, ಆಲ್ಬರ್ಟ್‌ ವಿಕ್ಟರಿ ಮುಂತಾದ ರಸ್ತೆಯಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.

ಅವರ ಮೊದಲ ಅವಧಿಯಲ್ಲಿ ಸುಮಾರು 3 ಸಾವಿರ ಕೋಟಿ ಅನುದಾನ ನೀಡಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈಗ ಎರಡನೆಯ ಪೂರ್ಣಾವಧಿಗೆ ಮುಂದುವರಿದರೆ ಮೈಸೂರಿನ ಪ್ರವಾಸೋದ್ಯಮ, ಚಿತ್ರನಗರಿ, ಡಿಸ್ನಿಲ್ಯಾಂಡ್‌ ಮುಂತಾದ ಅಭಿವೃದ್ಧಿ ಕಾರ್ಯಗಳು ಮೈಸೂರಿನಲ್ಲಿ ಇನ್ನೂ ಹೆಚ್ಚು ನಡೆಯಲಿದೆ. ಮೈಸೂರಿನವರೇ ಮುಖ್ಯಮಂತ್ರಿಗಳಾಗಿದ್ದರಿಂದ ಮೈಸೂರಿನ ಮೇಲೆ ವಿಶೇಷ ಕಾಳಜಿ ಇರುವುದರಿಂದ ಅದ್ಧೂರಿ ದಸರಾ ಆಚರಿಸಲು 40 ಕೋಟಿ ರು. ಬಿಡುಗಡೆಗೊಳಿಸಲು ಆದೇಶಿಸಲಾಗಿದೆ.

ಸಿದ್ದರಾಮಯ್ಯ ಅವರಿಗೆ ಮೈಸೂರಿನ ಮೇಲೆ ವಿಶೇಷವಾದ ಪ್ರೀತಿ ಇದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೇ ಇನ್ನೂ ಮೂರುವರೇ ವರ್ಷ ಅಂದರೆ ಎರಡನೇ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿದ್ದರು.

ನಮ್ಮ ಹೋಟೆಲ್‌ ಉದ್ಯಮವು ಅತಿಥಿ ದೇವೋಭವ ಉದ್ಯಮ, ಜಾತ್ಯತೀತ ಹಾಗೂ ಪಕ್ಷಾತೀತವಾಗಿದ್ದು, ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ಹೋಟೆಲ್‌ ಮಾಲೀಕರ ಸಂಘವು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಬಯಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರವಿಶಾಸ್ತ್ರಿ, ಸುಬ್ರಹ್ಮಣ್ಯ ತಂತ್ರಿ, ಎ.ಆರ್‌. ರವೀಂದ್ರಭಟ್‌, ಕೆ. ಭಾಸ್ಕರ್‌ಶೆಟ್ಟಿ ಮೊದಲಾದವರು ಇದ್ದರು.

Share this article