ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಶಿರೂರು ಸಂತ್ರಸ್ತರ ಆಗ್ರಹ

KannadaprabhaNewsNetwork |  
Published : Aug 29, 2024, 12:52 AM IST
ಕಾರವಾರದಲ್ಲಿ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವವರ ಹುಡುಕಾಟ ಕೈಬಿಟ್ಟಿರುವುದನ್ನು ಖಂಡಿಸಿ, ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡದೆ, ಕೊಟ್ಟಿರುವ ಭರವಸೆಗಳನ್ನು ಈಡೇರಿಸದ ಸರ್ಕಾರದ ನಡೆ ಖಂಡನಾರ್ಹ.

ಕಾರವಾರ: ಶಿರೂರು ಗುಡ್ಡ ಕುಸಿತದ ಸಂದರ್ಭದಲ್ಲಿ ಕಣ್ಮರೆಯಾದವರ ಪತ್ತೆ ಕಾರ್ಯ ಸರ್ಕಾರ ಕೈಬಿಟ್ಟಿರುವುದನ್ನು ಖಂಡಿಸಿ, ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಂತ್ರಸ್ತರು ಹಾಗೂ ಸಾರ್ವಜನಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಒಂದು ದಿನದ ಧರಣಿ ನಡೆಸಿ, ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದ ಪ್ರಣವಾನಂದ ಸ್ವಾಮೀಜಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಗೇಟ್ ಎದುರು ಮೃತರ ಕುಟುಂಬದವರು ಹಾಗೂ ಸಾರ್ವಜನಿಕರೊಂದಿಗೆ ಧರಣಿ ನಡೆಸಿದರು. ಜಿಲ್ಲಾಡಳಿತ, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಎನ್ಎಚ್ಎಐ ಮತ್ತು ಐಆರ್‌ಬಿ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಕೋಮು ಗಲಭೆ ಸಂದರ್ಭದಲ್ಲಿ ಮೃತಪಟ್ಟವರಿಗೆ ₹25 ಲಕ್ಷ ನೀಡುತ್ತದೆ. ಶಿರೂರು ಘಟನೆಯಲ್ಲಿ ಮೃತಪಟ್ಟವರಿಗೆ ಅನ್ಯಾಯ ಮಾಡಿದೆ. ವಯನಾಡಿನಲ್ಲಿ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ನೂರು ಮನೆ ನಿರ್ಮಾಣ ಮಾಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ರಾಹುಲ್ ಗಾಂಧಿ ಕ್ಷೇತ್ರ ಎನ್ನುವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಈ ರೀತಿ ನಡೆದುಕೊಂಡಿದ್ದಾರೆ. ಆದರೆ ಶಿರೂರು ಘಟನೆಯಿಂದ ಸಂತ್ರಸ್ತರಾದವಗೆ ನೀಡಿದ ಭರವಸೆ ಸಹ ಈಡೇರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪರಿಹಾರದ ರೂಪದಲ್ಲಿ ನಮ್ಮವರಿಗೆ ಬಿಡಿಗಾಸು ನೀಡುತ್ತಿದ್ದಾರೆ. ಸಂತ್ರಸ್ತರನ್ನು ದೆಹಲಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಸೌಜನ್ಯಕ್ಕೂ ನಮ್ಮನ್ನು ಮಾತನಾಡಿಸಿಲ್ಲ. ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವವರ ಹುಡುಕಾಟ ಕೈಬಿಟ್ಟಿರುವುದನ್ನು ಖಂಡಿಸಿ, ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡದೆ, ಕೊಟ್ಟಿರುವ ಭರವಸೆಗಳನ್ನು ಈಡೇರಿಸದ ಸರ್ಕಾರದ ನಡೆ ಖಂಡನಾರ್ಹ ಎಂದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಶಿರೂರು ದುರಂತದಲ್ಲಿ ಮೃತದೇಹಗಳು ಪತ್ತೆಯಾದಾಗ ಅಧಿಕಾರಿಗಳು ಸೌಜನ್ಯಕ್ಕೂ ಅಂತ್ಯಕ್ರಿಯೆ ಸಮಯದಲ್ಲಿ ಭಾಗವಹಿಸಿಲ್ಲ. ಸರ್ಕಾರ ಕೇವಲ ಐದು ಜನರಿಗೆ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಕೇಳಿದರೆ ಕಾನೂನು ಅಡ್ಡಿ ಎನ್ನುತ್ತಾರೆ. ಆದರೆ ನಾಪತ್ತೆಯಾಗಿರುವ ಅರ್ಜುನ್ ಅಲ್ಲಿನ ಸರ್ಕಾರ ಪತ್ನಿಗೆ ಸರ್ಕಾರಿ ಉದ್ಯೋಗ ಮಗನ ಭವಿಷ್ಯಕ್ಕೆ ಹಣವನ್ನು ಇಟ್ಟಿದೆ. ಆದರೆ ನಮ್ಮ ಸರ್ಕಾರ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮುಖ್ಯಮಂತ್ರಿ ಸ್ಥಳಕ್ಕೆ ಬಂದರೂ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ ಎಂದರು. ಜಿಲ್ಲಾಡಳಿತ, ಜನಪ್ರತಿನಿಧಿಗಳು ನಾಪತ್ತೆಯಾದ ಜಗನ್ನಾಥ ನಾಯ್ಕ ಮಕ್ಕಳಿಗೆ ಉದ್ಯೋಗ ನೀಡುವುದಾಗಿ ಈವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದರು.ಹಾಲಕ್ಕಿ ಸಮುದಾಯದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ಶಿರೂರು ಗುಡ್ಡ ದುರಂತದಲ್ಲಿ ಮೃತಪಟ್ಟವರು ಹಾಗೂ ನಾಪತ್ತೆಯಾದವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಅಲ್ಲದೆ ನಾಪತ್ತೆಯಾದ ಇನ್ನು ಮೂವರಿಗಾಗಿ ಕೂಡಲೇ ಹುಡುಕಾಟ ನಡೆಸಬೇಕು. ಸಂತ್ರಸ್ತರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮೃತ ಲಕ್ಷ್ಮಣ ನಾಯ್ಕ ಕುಟುಂಬಸ್ಥರು, ಜಗನ್ನಾಥ ನಾಯ್ಕ ಮಕ್ಕಳು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆ.ಎಂ.ಇಮಾಂ ಸ್ಮಾರಕ ಪ್ರಶಸ್ತಿಗೆ ವೈಎಸ್‌ವಿ ದತ್ತ ಆಯ್ಕೆ
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲು ವಿಜ್ಞಾನ ವಸ್ತುಪ್ರದರ್ಶನ ಪೂರಕ