ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

KannadaprabhaNewsNetwork | Published : Apr 24, 2024 2:16 AM

ಸಾರಾಂಶ

ಹುಬ್ಬಳ್ಳಿ ಬಿವಿಬಿ ಕಾಲೇಜಿನ ನೇಹಾ ಹಿರೇಮಠ ವಿದ್ಯಾರ್ಥಿನಿ ಕೊಲೆಗೈದ ಆರೋಪಿಯನ್ನು ಮರಣ ದಂಡನೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ತಾಲೂಕಿನ ವಿವಿಧ ಮಠಾಧಿಶರ ನೇತೃತ್ವದಲ್ಲಿ ವೀರಶೈವ ಸಮಾಜ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ವಿವಿಧ ಮಠಾಧಿಶರ ನೇತೃತ್ವದಲ್ಲಿ ವೀರಶೈವ ಸಮಾಜ ತಾಲೂಕು ಘಟಕದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಜೇವರ್ಗಿ

ಹುಬ್ಬಳ್ಳಿ ಬಿವಿಬಿ ಕಾಲೇಜಿನ ನೇಹಾ ಹಿರೇಮಠ ವಿದ್ಯಾರ್ಥಿನಿ ಕೊಲೆಗೈದ ಆರೋಪಿಯನ್ನು ಮರಣ ದಂಡನೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ತಾಲೂಕಿನ ವಿವಿಧ ಮಠಾಧಿಶರ ನೇತೃತ್ವದಲ್ಲಿ ವೀರಶೈವ ಸಮಾಜ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನೇಹಾ ಹಿರೇಮಠ ಕೊಲೆ ಪ್ರಕರಣ ಲವ್ ಜಿಹಾದ್‌ ಎನ್ನುವ ಮಾರಕ ಸಂಚಿನ ಒಂದು ರೂಪವಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ಸಂಪರ್ಕ ಸಾಧಿಸುವುದು ಅವರನ್ನು ನಂಬಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡುವುದು. ಪ್ರೇಮಕ್ಕೆ ವಿರೋಧಿಸಿದರೆ ಅವರನ್ನು ಕೊಲೆ ಮಾಡುವಂತಹ ನೀಚ ಕೃತ್ಯಗಳು ದಿನಂಪ್ರತಿ ಹೆಚ್ಚಾಗುತ್ತಿವೆ. ಲವ್ ಜಿಹಾದ್‌ ಪ್ರಕರಣ ತಡೆಯುವಲ್ಲಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಮಾಡುವಲ್ಲಿ ಪೊಲೀಸ್‌ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಷಣ್ಮುಖ ಶಿವಯೋಗಿ ಮಠದಿಂದ ಅಖಂಡೇಶ್ವರ ವೃತ್ತ, ಬಸವೇಶ್ವರರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಟಾಯರ್‌ಗೆ ಬೆಂಕಿ ಹಚ್ಚಿ, ಬೀದರ್‌ ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ನಂತರ ತಹಸೀಲ್ದಾರ್‌ ಮಲ್ಲಣ್ಣ ಯಲಗೋಡ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವಿಕರಿಸಿದರು.

ಪ್ರತಿಭಟನೆಯಲ್ಲಿ ನೆಲೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಶಖಾಪುರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು, ಜೇರಟಗಿ ಶ್ರೀ ಮಹಾಂತ ಸ್ವಾಮೀಜಿ, ಯಡ್ರಾಮಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ರಾಜಶೇಖರ ಸೀರಿ, ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಮುಖಂಡರಾದ ರಮೇಶಬಾಬು ವಕೀಲ್, ಬಸವರಾಜ ಪಾಟೀಲ್ ನರಿಬೋಳ, ಬಸವರಾಜ ಮಾಲಿಪಾಟೀಲ್, ಪ್ರವೀಣಕುಮಾರ ಕುಂಟೋಜಿಮಠ, ವೀರುಪಾಕ್ಷಯ್ಯ ನಂದಿಕೋಲಮಠ, ಗುಂಡು ಸಾಹು ಗೋಗಿ, ಗುರುಲಿಂಗಯ್ಯ ಹಿರೇಮಠ, ಪಿ.ಎಂ.ಮಠ, ದಯಾನಂದ ದೇವರಮನಿ, ಸೋಮಶೇಖರ ಗುಡೂರ, ಉಮಾಕಾಂತ ಗೋಲಗೇರಿ, ಬಸಯ್ಯಸ್ವಾಮಿ ಕಟ್ಟಿಸಂಗಾವಿ, ಈರಯ್ಯ ಘಂಟಿಮಠ, ಷಣ್ಮುಖಯ್ಯ ಘಂಟಿಮಠ, ಐ.ಎಸ್.ಹಿರೇಮಠ, ಶಿವಶರಣಯ್ಯ ಚತುರಾಚಾರಿಮಠ, ಈರಣ್ಣ ಅವರಾದ, ಶ್ರೀಶೈಲ ಕರಕಿಹಳ್ಳಿ, ದೊಡ್ಡಪ್ಪಗೌಡ ಕಲ್ಲಹಂಗರಗಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.

ಬೆಂಬಲ: ಕೊಲೆ ಪ್ರಕರಣ ಖಂಡಿಸಿ ಪಟ್ಟಣದ ವರ್ತಕರ ಸಂಘ, ಜಗಂಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆ ಸೇರಿ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article