ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ಆಗ್ರಹ

KannadaprabhaNewsNetwork |  
Published : Dec 23, 2025, 01:45 AM IST
22ಕೆಎಂಎನ್ ಡಿ29 | Kannada Prabha

ಸಾರಾಂಶ

ಗೆಜ್ಜಲಗೆರೆ ಗ್ರಾಮ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮದ ಜನಪ್ರತಿನಿಧಿಗಳು, ರೈತರು ಮತ್ತು ಗ್ರಾಮಸ್ಥರು ಸೋಮವಾರದಿಂದ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಗ್ರಾಮ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮದ ಜನಪ್ರತಿನಿಧಿಗಳು, ರೈತರು ಮತ್ತು ಗ್ರಾಮಸ್ಥರು ಸೋಮವಾರದಿಂದ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಗ್ರಾಪಂ ಆವರಣದಲ್ಲಿ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಬುದ್ಧಿಜೀವಿಗಳು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಮಹಿಳೆಯರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಮಿಯಾನ ಹಾಕಿ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ನಗರೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರ, ಪೌರಾಡಳಿತ ನಿರ್ದೇಶನಾಲಯ ಹಾಗೂ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಪಂಗಳು ಹಸಿರು ವಲಯದಿಂದ ಕೂಡಿವೆ. ಇಂಥ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಬ್ದುಲ್ ನಜೀರ್ ಸಾಬ್ ಅವರ ಪರಿಶ್ರಮದ ಫಲವಾಗಿ ನಿರ್ಮಾಣವಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಶಾಸಕರು ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ತಂದು ಸ್ವಾತಂತ್ರ್ಯ ಕಸಿವ ಕೆಲಸ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ, ಲೋಕಸಭಾ ಸದಸ್ಯರು ಮತ್ತು ಶಾಸಕರ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಶಾಸಕರು ನಗರಸಭೆ ವ್ಯಾಪ್ತಿಗೆ ಸೇರಿಸುವ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ದ್ರೋಹ ಮಾಡಿದ್ದಾರೆ ಎಂದು ರೈತ ಮುಖಂಡ ನಿಂಗಪ್ಪಾಜಿ ಕಿಡಿಕಾರಿದರು.

ಗೆಜ್ಜಲಗೆರೆ ಗ್ರಾಮ 1972ರಿಂದಲೂ ರೈತ ಚಳವಳಿ. ಕಾವೇರಿ ಹೋರಾಟ ದಲ್ಲಿ ಮುಂಚೂಣಿಯಲಿದೆ. ಹೀಗಾಗಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವುದು ಬೇಡ ಎಂಬ ದೃಷ್ಟಿಯಿಂದ ನಗರಸಭೆ ವ್ಯಾಪ್ತಿಗೆ ಗ್ರಾಪಂ ಸೇರ್ಪಡೆ ವಿಚಾರದಲ್ಲಿ ಗಾಂಧಿ ಮಾರ್ಗದ ಹೋರಾಟ ನಡೆಸಲಾಗುತ್ತಿದೆ. ಅಷ್ಟರಲ್ಲಿ ಸೇರ್ಪಡೆ ಕೈಬಿಡದಿದ್ದಲ್ಲಿ ನಂತರ ದಿನ ಗಳಲ್ಲಿ ಹೋರಾಟದ ಸ್ವರೂಪ ಬದಲಾದರು ಆಶ್ಚರ್ಯವಿಲ್ಲ ಎಂದು ಸರ್ಕಾರ ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ರೈತ ಸಂಘದ ಜಿ.ಎ.ಶಂಕರ್, ಜಿ.ಟಿ.ವೀರಪ್ಪ, ಗ್ರಾಪಂ ಅಧ್ಯಕ್ಷ ರಾಧಾ, ಜಿ.ಟಿ.ಚಂದ್ರಶೇಖರ್, ಡಿಸಿ ಮಹೇಂದ್ರ, ನಿಂಗಪ್ಪ, ಡಾಬಾ ಕಿಟ್ಟಿ, ಪ್ರವೀಣ್ ಕುಮಾರ್, ಗುರುಮೂರ್ತಿ, ಚಂದ್ರಶೇಖರ್, ಜಿಟಿ ಪುಟ್ಟಸ್ವಾಮಿ, ನಾಗೇಶ, ಮೋಹನ್, ರಾಘು, ಜಿ.ಪಿ.ಯೋಗೇಶ, ಮದ್ದೂರು ತಾಲೂಕುಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸತ್ಯಪ್ಪ ಮತ್ತಿತರರು ಭಾಗವಹಿಸಿದ್ದರು.ಶಾಸಕರಿಂದ ಮತದಾರರ ಬೆನ್ನಿಗೆ ಚೂರು ಹಾಕುವ ಕೆಲಸ: ಸುನಂದ ಜಯರಾಮ್

ಮದ್ದೂರು:

ಕ್ಷೇತ್ರದ ಜನಪ್ರತಿನಿಧಿಗಳು ಚುನಾವಣೆಯಲ್ಲಿ ತಮ್ಮನ ಬೆಂಬಲಿಸಿದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆ ಹೊರತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು ಎಂದು ರೈತ ಪರ ಹೋರಾಟಗಾರ್ತಿ ಸುನಂದ ಜಯರಾಮ್ ಸೋಮವಾರ ಹೇಳಿದರು.

ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿ, ಜನಪ್ರತಿನಿಧಿಗಳು ಗ್ರಾಮಗಳನ್ನು ಅಧಿಕಾರಿಗಳ ಕೈಗೆ ಕೊಡುವ ದ್ರೋಹದ ಕೆಲಸ ಮಾಡಬಾರದು. ಅಂತಹ ಪರಿಸ್ಥಿತಿ ಬಂದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನ ಸಮಸ್ಯೆಗಳಿಗೆ ಸ್ಪಂದಿಸಬೇಕುಯ ಆದರೆ ಶಾಸಕರು ಬೇಲಿಯೇ ಎದ್ದು ಹೊಲ ಮೇದಂತಹ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಾಹಿತಿ ಜಿ.ಟಿ.ವೀರಪ್ಪ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆ ಆದ ಯಾವುದೇ ಜನ ಪ್ರತಿನಿಧಿಗಳು ಜನರ ಅಭಿಪ್ರಾಯಕ್ಕೆ ಬದ್ಧರಾಗಿರಬೇಕು ಹೊರತು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಇಡೀ ಗ್ರಾಮದ ಜನರ ಬದುಕನ್ನು ನಾಶ ಮಾಡುವ ಕೃತ್ಯಕ್ಕೆ ಇಳಿಯಬಾರದು ಎಂದು ಶಾಸಕ ಉದಯ್ ಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಮಹಿಳೆಯರನ್ನು ಪ್ರಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ: ಶಾಸಕ
ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಆಳ್ವಾಸ್ ನಿಸ್ವಾರ್ಥ ಸೇವೆ: ಸಂಸದ ಶ್ರೇಯಸ್ ಪಟೇಲ್‌