ಕನ್ನಡಪ್ರಭ ವಾರ್ತೆ ಸಂಡೂರು
ಸಂಡೂರು ಪುರಸಭೆ ವ್ಯಾಪ್ತಿಯಲ್ಲಿನ ಧರ್ಮಾಪುರ ಗ್ರಾಮದಲ್ಲಿ ರೈಲ್ವೆ ಲೈನ್ ಮತ್ತು ಸೈಡಿಂಗ್ ನಿರ್ಮಾಣಕ್ಕಾಗಿ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಗೆ ಗ್ರಾಮದ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ರೈತರು ಸೋಮವಾರ ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಜಿ.ಎಸ್. ಸೋಮಪ್ಪ, ಧರ್ಮಾಪುರ ಗ್ರಾಮ ಸಂಡೂರು ಪಟ್ಟಣಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಹಲವು ರೈತರು ಗ್ರಾಮದ ಸುತ್ತಲಿನ ಗಣಿ ಚಟುವಟಿಕೆಗಳಿಗೆ ಭೂಮಿ ಕಳೆದುಕೊಂಡಿದ್ದಾರೆ. ಇಲ್ಲಿನ ಜಮೀನು ಫಲವತ್ತಾಗಿದ್ದು, ಕೆಲ ರೈತರು ನೀರಾವರಿ ವ್ಯವಸ್ಥೆ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಈಗಾಗಲೇ ರೈಲ್ವೆ ಲೈನ್ ಮತ್ತು ಸೈಡಿಂಗ್‌ಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ತಹಶೀಲ್ದಾರ್ ಅವರ ಕಾರ್ಯಾಲಯದಿಂದ ರೈತರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಕಂದಾಯ ಮತ್ತು ಸರ್ವೇ ಇಲಾಖೆಯ ಭೂಮಾಪನ ಸಿಬ್ಬಂದಿಗಳ ತಂಡ ಸ್ಥಳ ಪರಿಶೀಲನೆ ಮಾಡಲು ಹೊರಟಿದೆ. ಭೂಸ್ವಾಧೀನ ಪ್ರಕ್ರಿಯೆಗೆ ರೈತರ ವಿರೋಧವಿದೆ ಎಂದು ಹೇಳಿದರು.
ಗ್ರಾಮದ ಬಳಿಯಲ್ಲಿ ರೈಲ್ವೆ ಯಾರ್ಡ್, ಸ್ಟಾಕ್ ಯಾರ್ಡ್ ಮತ್ತು ಸೈಡಿಂಗ್ ಚಟುವಟಿಕೆಗಳು ಆರಂಭವಾದರೆ, ಗ್ರಾಮದ ಜನತೆ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ರೈಲ್ವೆ ಲೈನ್ ಮತ್ತು ಸೈಡಿಂಗ್ ನಿರ್ಮಾಣಕ್ಕಾಗಿ ನಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದ್ದು, ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಗ್ರಾಮದ ರೈತ ಮುಖಂಡರಾದ ಎಂ. ಬಸವರಾಜ, ಕೆ. ಶಿವಪ್ಪ, ಕೆ. ನರಸಪ್ಪ, ಜಿ. ಮಾರುತಿ, ಜಿ. ಗವಿಸಿದ್ದಪ್ಪ, ಕೆ. ಪಂಪಾಪತಿ, ಕೊಟ್ರಪ್ಪ, ರೇಣುಕಮ್ಮ, ಗಿರೀಶ್, ಎಂ. ಶಿವಣ್ಣ, ಎಂ. ರಾಮಣ್ಣ, ದೇವಿರಮ್ಮ, ಎಂ. ನಾರಪ್ಪ, ರೇಣುಕಮ್ಮ, ಈರಣ್ಣ, ಎಂ. ಕುಮಾರಸ್ವಾಮಿ, ಎರಿಸ್ವಾಮಿ, ಎಂ. ಮಂಜುನಾಥ, ಎಂ ಸಿದ್ದಮ್ಮ, ರಾಮುನಾಯ್ಕ, ಎಂ.ಎಲ್.ಕೆ. ನಾಯ್ಡು, ಶಾರದಮ್ಮ, ಎಚ್. ನಜೀರ್ ಮುಂತಾದವರು ಉಪಸ್ಥಿತರಿದ್ದರು.