ವರನಟ ಡಾ.ರಾಜ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲು ಆಗ್ರಹ

KannadaprabhaNewsNetwork |  
Published : Apr 26, 2024, 12:45 AM IST
24ಕೆಎಂಎನ್‌ಡಿ-1ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿರುವ ಡಾ.ರಾಜ್ ಪ್ರತಿಮೆ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ಕರ್ನಾಟಕರತ್ನ ಡಾ. ರಾಜ್‌ಕುಮಾರ್ ಅವರ ೯೫ನೇ ವರ್ಷದ ಜನ್ಮದಿನಾಚರಣೆ ಮತ್ತು ಸಿಹಿ ವಿತರಣೆ ಕಾರ್ಯ ನಡೆಯಿತು. | Kannada Prabha

ಸಾರಾಂಶ

ಡಾ.ರಾಜ್‌ಕುಮಾರ್ ಅವರ ಸಿನಿಮಾ ನೋಡಿ ಸಾಕಷ್ಟು ಜನರು ತಮ್ಮ ಜೀವನ ಶೈಲಿಯನ್ನೇ ಬದಲಿಸಿಕೊಂಡಿದ್ದಾರೆ. ಜೀವನ ನಡೆಸುವುದನ್ನು ಕಲಿತವರೂ ಇದ್ದಾರೆ. ಬಂಗಾರದ ಮನುಷ್ಯ ಸಿನಿಮಾ ಹಲವರನ್ನು ಕೃಷಿಯತ್ತ ಆಕರ್ಷಿತರಾಗುವಂತೆ ಮಾಡಿತು. ಜೀವನ ಚೈತ್ರ ಸಿನಿಮಾ ಗ್ರಾಮಾಂತರ ಪ್ರದೇಶದ ಜನರಲ್ಲಿ ಮದ್ಯ ವಿರೋಧಿ ಮನೋಭಾವವನ್ನು ಹುಟ್ಟುಹಾಕಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಚಲನಚಿತ್ರರಂಗದ ಮೇರುನಟ ಡಾ.ರಾಜ್‌ಕುಮಾರ್‌ ಅವರಿಗೆ ಭಾರತರತ್ನ ಪುರಸ್ಕಾರ ನೀಡಬೇಕು ಎಂದು ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದಲ್ಲಿರುವ ಡಾ.ರಾಜ್ ಪ್ರತಿಮೆ ಬಳಿ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ ೯೫ನೇ ವರ್ಷದ ಜನ್ಮದಿನಾಚರಣೆ ಮತ್ತು ಸಿಹಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಾ.ರಾಜ್ ಅವರ ಆದರ್ಶ ಮತ್ತು ಸದಭಿರುಚಿಯ ಚಿತ್ರಗಳು ಜನಮಾನಸದಲ್ಲಿ ಉಳಿದಿದೆ. ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡತನವನ್ನು ಮೈಗೂಡಿಸಿಕೊಂಡು ಸರಳ, ಸಜ್ಜನಿಕೆಯ, ಮಾನವೀಯ ಗುಣಗಳೊಂದಿಗೆ ಸಾಕಷ್ಟು ಕಲಾವಿದರಿಗೆ ರೋಲ್‌ಮಾಡೆಲ್ ಆಗಿದ್ದಾರೆ ಎಂದರು.

ಡಾ.ರಾಜ್‌ಕುಮಾರ್ ಅವರ ಸಿನಿಮಾ ನೋಡಿ ಸಾಕಷ್ಟು ಜನರು ತಮ್ಮ ಜೀವನ ಶೈಲಿಯನ್ನೇ ಬದಲಿಸಿಕೊಂಡಿದ್ದಾರೆ. ಜೀವನ ನಡೆಸುವುದನ್ನು ಕಲಿತವರೂ ಇದ್ದಾರೆ. ಬಂಗಾರದ ಮನುಷ್ಯ ಸಿನಿಮಾ ಹಲವರನ್ನು ಕೃಷಿಯತ್ತ ಆಕರ್ಷಿತರಾಗುವಂತೆ ಮಾಡಿತು. ಜೀವನ ಚೈತ್ರ ಸಿನಿಮಾ ಗ್ರಾಮಾಂತರ ಪ್ರದೇಶದ ಜನರಲ್ಲಿ ಮದ್ಯ ವಿರೋಧಿ ಮನೋಭಾವವನ್ನು ಹುಟ್ಟುಹಾಕಿತು ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ವರನಟ ಡಾ.ರಾಜ್ ಅವರು ಕನ್ನಡ ಚಿತ್ರರಂಗದದ ದೊಡ್ಡ ಆಸ್ತಿ, ೭೦-೮೦ರ ದಶಕದಲ್ಲಿ ಸಾಮಾಜಿಕ ಸುಧಾರಣೆಯನ್ನು ತಂದಂತಹ ಮಹಾನ್‌ನಾಯಕ ನಟರಾಗಿದ್ದಾರೆ. ೧೨ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂದು ಹೇಳಿದರು, ಅದಕ್ಕೆ ಜೀವ ತುಂಬುವ ಕಾರ್ಯವನ್ನು ಮಾಡಿದ್ದು ರಾಜ್ ಎಂದು ಸ್ಮರಿಸಿದರು.

ಡಾ.ರಾಜ್ ಅವರು ಸಾಮಾಜಿಕ ಕಳಕಳಿಯುಳ್ಳ ಪಾತ್ರಗಳು, ಸಿನಿಮಾಗಳಲ್ಲಿ ನಟಿಸಿ, ಸಿನಿಮಾ ಮಾಧ್ಯಮ, ಸಾಮಾಜಿಕ ಪಾತ್ರಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಇಂತಹ ವಿಶ್ವರತ್ನರಿಗೆ ಭಾರತರತ್ನ ಪುರಸ್ಕಾರ ನೀಡದಿರುವುದು ದುರಂತ. ಕನ್ನಡಿಗರಾದ ಕುವೆಂಪು, ಶ್ರೀ ಶಿವಕುಮಾರ ಸ್ವಾಮೀಜಿ, ಡಾ.ರಾಜ್‌ಕುಮಾರ್ ಇಂತಹವರಿಗೆ ನೀಡುವುದು ಅವಶ್ಯ ಎಂದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ತಾಲೂಕು ಅಧ್ಯಕ್ಷ ಡಿ.ಅಶೋಕ್, ವಕೀಲ ರಾಮಯ್ಯ, ಸೌಂದರ್ಯರಾಜ್, ನಾಗರಾಜ್, ಎಂ.ಪಿ. ಸ್ವಾಮಿ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ