ಕಾರವಾರ: ಚಾಲಿ ಅಡಕೆಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟಕದ ವತಿಯಿಂದ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ಹೊನ್ನಾವರದಲ್ಲಿ ತಹಸೀಲ್ದಾರ್ ರವಿರಾಜ ದೀಕ್ಷಿತ ಅವರ ಮೂಲಕ ಸಲ್ಲಿಸಲಾಯಿತು.
ಅಡಕೆ ಸುಲಿಯುವ ಯಂತ್ರ, ಕಳೆ ಹೊಡೆಯುವ ಯಂತ್ರ, ಗುಂಡಿ ತೋಡುವ ಯಂತ್ರ, ಕೊನೆ ದೋಟಿ, ಕೊಳೆ ಪಂಪು ಹಾಗೂ ಅಡಕೆ ಕೃಷಿಗೆ ಸಂಬಂಧಿಸಿದ ಸಲಕರಣೆಗಳಿಗೆ ಶೇ. ೭೫ರಷ್ಟು ಸಬ್ಸಿಡಿ ಒದಗಿಸಬೇಕು. ಕಸಿ ಕಟ್ಟಿದ ಕಾಳುಮೆಣಿಸನ ಬಳ್ಳಿ, ವೀಳ್ಯದೆಲೆ ಬಳ್ಳಿಗಳನ್ನು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಚಿತವಾಗಿ ನೀಡಬೇಕು. ಹನಿ ನೀರಾವರಿ, ಐಬೆಕ್ಸ್ ತಂತಿ ಬೇಲಿ, ಸೋಲಾರ್ ಪಂಪು, ಸೋಲಾರ್ ತಾಡಪತ್ರಿಗೂ ಶೇ. ೭೫ ಸಬ್ಸಿಡಿ ಬೇಕು. ಮೈಲುತುತ್ತ- ಬಯೋಫೈಟ್ ಮುಂತಾದವನ್ನು ರೈತರು ಕೊಳ್ಳುವ ಸಮಯದಲ್ಲೇ ಶೇ. ೭೫ರಷ್ಟು ಸಬ್ಸಿಡಿ ಸಿಗಬೇಕು. ರೈತರ ಕುಟುಂಬಕ್ಕೆ ಜನರಲ್ ವಿಮೆ ಮಾಡಿಸಬೇಕು. ಭತ್ತಕ್ಕೂ ಬೆಂಬಲ ಬೆಲೆ ಹೆಚ್ಚಿಸಿ, ಬೀಜ- ರಸಗೊಬ್ಬರಕ್ಕೆ ಶೇ. ೭೫ ಸಬ್ಸಿಡಿ ಬೇಕು.
ರೈತರ ಅಕ್ರಮ ಸಾಗುವಳಿ ಜಮೀನನ್ನು ಸಕ್ರಮಗೊಳಿಸಬೇಕು. ಹಾಡಿ ಬೆಟ್ಟವನ್ನು ಮಾಲ್ಕಿ ಜಮೀನಾಗಿ ಪರಿವರ್ತಿಸಬೇಕು. ಅತಿವೃಷ್ಟಿಯಿಂದ ರೈತರ ಪೂರ್ಣ ಮನೆಹಾನಿಗೆ ₹೧೦ ಲಕ್ಷ ಹಾಗೂ ಭಾಗಶಃ ಹಾನಿಗೆ ₹೩ ಲಕ್ಷ ಪರಿಹಾರ ಕೊಡಬೇಕು. ರೈತರು ದೇಸಿ ಆಕಳುಗಳನ್ನು ಸಾಕುತ್ತಿದ್ದರೆ ಅವುಗಳಿಗೆ ಪಡಿತರ ಚೀಟಿಯಲ್ಲಿ ಆಹಾರ ಒದಗಿಸಬೇಕು. ಜಾನುವಾರು ಮೃತಪಟ್ಟರೆ ₹೨೫ ಸಾವಿರ ಪರಿಹಾರ ನೀಡಬೇಕು. ತೆಂಗಿನಕಾಯಿಗೆ ಬೆಂಬಲ ಬೆಲೆ ಘೋಷಿಸಬೇಕು. ಕಾಡುಪ್ರಾಣಿಗಳಿಂದ ಅಡಕೆ ಬೆಳೆ ಹಾನಿಯಾದಲ್ಲಿ ಪ್ರತಿ ಗಿಡಕ್ಕೆ ₹೨೦೦೦ ತೆಂಗಿನ ಗಿಡಕ್ಕೆ ₹೪೦೦೦ ಪರಿಹಾರ ನೀಡಬೇಕು. ರೈತರ ಪಹಣಿ, ಭೂದಾಖಲೆ ಪ್ರತಿಗಳನ್ನು ಪ್ರತಿ ಸರ್ವೆ ನಂಬರ್‌ಗೆ ₹೫ ದರದಲ್ಲಿ ಒದಗಿಸಬೇಕು. ಕಂಪ್ಯೂಟರ್ ಸರ್ವರ್ ಸಮಸ್ಯೆ ಎಂಬುದು ರೈತನಿಗೆ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಸಾಲ್ಕೋಡ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ನೀರಿನ ಕಟ್ಟೆಗಳು ಕಸಕಡ್ಡಿಗಳಿಂದ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲಲ್ಲಿ ಹೊಳೆಯ ಒತ್ತುವರಿಯೂ ಆಗಿದ್ದು ಸಮಸ್ಯೆ ಬಗೆಹರಿಸಬೇಕು. ಸಾಕಷ್ಟು ಉದ್ಯೋಗ ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ಭರಿಸುತ್ತಿರುವ ಅಡಕೆ ಬೆಳೆಯ ವಿಚಾರದಲ್ಲಿ ಭಾರತೀಯ ಕಿಸಾನ ಸಂಘದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.