ಸಾರಾಂಶ
ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಇಲ್ಲಿದ್ದ ನಾಲ್ಕು ಜನ ವೈದ್ಯರು ವರ್ಗಾವಣೆಯಾದರೆ, ದಂತ ವೈದ್ಯರೊಬ್ಬರಿಗೆ ಪೋಸ್ಟಿಂಗ್ ನೀಡಿಲ್ಲ. ನಾಲ್ವರು ವೈದ್ಯರ ವರ್ಗಾವಣೆಯಿಂದ ತೆರವಾದ ಸ್ಥಾನಗಳಿಗೆ ಮೂವರು ವೈದ್ಯರನ್ನು ನಿಯೋಜಿಸಿದ್ದರೂ ಅವರು ಹಾಜರಾಗಿಲ್ಲ. ಇರುವ ಒಬ್ಬ ಸ್ತ್ರೀರೋಗ ತಜ್ಞರ ಸಹಾಯದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆ ತುಂಬಾ ಕಷ್ಟಸಾಧ್ಯವಾಗುತ್ತಿದೆ.
ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸುತ್ತಲಿನ ಬನಹಟ್ಟಿ, ರಬಕವಿ, ತೇರದಾಳ, ಮಹಾಲಿಂಗಪುರ, ಅಥಣಿ, ಮುಧೋಳ ಸೇರಿದಂತೆ ತಾಲೂಕಿನ 48 ಹಳ್ಳಿಗಳ ರೋಗಿಗಳು, ಗರ್ಭಿಣಿಯರು ತೊಂದರೆ ಅನುಭವಿಸುವಂತಾಗಿದೆ. ಹತ್ತಿರದ ಬಬಲೇಶ್ವರ ಕ್ಷೇತ್ರ, ಅಥಣಿಕ್ಷೇತ್ರ, ಮುಧೋಳ ಹಾಗೂ ತೇರದಾಳ ಕ್ಷೇತ್ರಗಳಿಗೆ ಸೇರಿದ ಗ್ರಾಮಗಳಿಂದ ಪ್ರತಿನಿತ್ಯ ಹಲವಾರು ಬಡ ಹಾಗೂ ರೈತ ಕುಟುಂಬಗಳ ಬಾಣಂತಿಯರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಅವರೆಲ್ಲ ಖಾಸಗಿ ಆಸ್ಪತ್ರೆ ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ತಿಂಗಳಿಗೆ ಸುಮಾರು 200ಕ್ಕೂ ಅಧಿಕ ಹೆರಿಗೆಗಳಾಗುವ ಆಸ್ಪತ್ರೆಗೆ ಈಗ ವೈದ್ಯರ ಕೊರತೆ ಕಾಡುತ್ತಿದೆ. ಮುಖ್ಯವಾಗಿ ಬೇಕಾಗಿದ್ದ ಹೆರಿಗೆ ವೈದ್ಯರೇ ರಾಜೀನಾಮೆ ನೀಡಿದ್ದಾರೆ.ಎಸ್‌ಎನ್‌ಸಿಯು ಘಟಕ ಸ್ಥಗಿತ:
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ರೋಗ ತಜ್ಞ, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್ ತಜ್ಞರ ಕೊರತೆ ಎದುರಾಗಿದೆ. ದಂತ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ವಿಶೇಷ ಮಕ್ಕಳ ಆರೈಕೆ ಘಟಕದ ವೈದ್ಯರಿಲ್ಲದೆ ಸ್ಥಗಿತವಾಗಿದೆ. ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞರ ಅವಶ್ಯಕತೆ ಇದೆ. ತುರ್ತು ಚಿಕಿತ್ಸಾ ಘಟಕಕ್ಕೆ ನಾಲ್ಕು ಜನ ವೈದ್ಯರು ಬೇಕು.ಸದ್ಯ ಇಲ್ಲಿರುವ ತಜ್ಞ ವೈದ್ಯರಿಂದಲೇ ತುರ್ತು ಚಿಕಿತ್ಸಾ ಘಟಕದ ನಿರ್ವಹಣೆ ನಡೆಸಲಾಗುತ್ತಿದೆ. ಜೊತೆಗೆ ಸ್ಟಾಫ್ ನರ್ಸ್‌ಗಳ ಕೊರತೆಯೂ ಇದೆ.ಜಿಲ್ಲೆಯಲ್ಲಿಯೇ ದೊಡ್ಡ ಆಸ್ಪತ್ರೆ:
ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲಿಯೇ ದೊಡ್ಡದು. ಸುಮಾರು ನೂರು ಹಾಸಿಗೆಗಳ ಸೌಲಭ್ಯ ಹೊಂದಿದೆ. ಗರ್ಭಿಣಿಯರು ಹಾಗೂ ಮಕ್ಕಳಿಗಾಗಿಯೇ ಸರ್ಕಾರ ಪ್ರತ್ಯೆಕ ಆಸ್ಪತ್ರೆ ಹಾಗೂ ಸೌಲಭ್ಯ ಒದಗಿಸಿದೆ. ಆದರೆ ಸಿಬ್ಬಂದಿ ಮತ್ತು ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳ ಪರದಾಟ ತಪ್ಪಿಲ್ಲ. ಒಂದಲ್ಲ ಒಂದು ಕೊರತೆ ಅನುಭವಿಸುತ್ತಿರುವ ಆಸ್ಪತ್ರೆಗೆ ಕಾಯಕಲ್ಪ ಬೇಕಿದೆ. ಕಳೆದ ವರ್ಷ ಆರೋಗ್ಯ ಸಚಿವ ದಿನೇಶ ಗುಂಡೂರಾವ ಭೇಟಿ ನೀಡಿದ್ದ ಸಂದರ್ಭದಲ್ಲಿ ಕುಂದು ಕೊರತೆಗಳ ಮನವಿ ಸಲ್ಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆ ಅವಲಂಬಿಸಿರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ವೈದ್ಯರ ಕೊರತೆ ಉಂಟಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಧ್ಯ ಇರುವ ಒಬ್ಬರೇ ಸ್ತ್ರೀರೋಗ ತಜ್ಞರ ಸಹಾಯದಿಂದ ಆಸ್ಪತ್ರೆ ನಡೆಸಲಾಗುತ್ತಿದೆ. ಇದರಿಂದ ವೈದ್ಯರಿಗೆ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ತೊಂದರೆ ಅನುಭವಿಸುವಂತಾಗಿದೆ. ಸರಳವಿರುವ ಪ್ರಕರಣಗಳಲ್ಲಿ ರೋಗಿಗಳನ್ನು ಸಮಾಧಾನ ಪಡಿಸಬೇಕಾಗಿದೆ. ಕಠಿಣ ಪ್ರಕರಣಗಳಿದ್ದಲ್ಲಿ ಖಾಸಗಿ ಆಸ್ಪತ್ರೆ, ವಿಜಯಪುರ ಅಥವಾ ಬಾಗಲಕೋಟೆಗೆ ಹೋಗುವಂತೆ ಹೇಳಿ ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಂತ ವೈದ್ಯರಿಲ್ಲ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಶಾಸಕರು ಮಾಜಿ ಶಾಸಕರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಕೂಡಲೇ ಅವಶ್ಯವಿರುವ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಲಾಗಿದೆ. ಬಡವರಿಗೆ ಸರ್ಕಾರಿ ಆರೋಗ್ಯ ಸೇವೆಗಳು ದೊರಕುವಂತೆ ಸಂಬಂಧ ಪಟ್ಟವರು ವ್ಯವಸ್ಥೆ ಮಾಡಬೇಕು.- ಶ್ರೀಧರ ಕಂಬಿ, ಸ್ಥಳೀಯರು.
ಸರ್ಕಾರಿ ತಾಯಿ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪತ್ರದ ಮೂಲಕ ಸಮಸ್ಯೆ ತಿಳಿಸಲಾಗಿದೆ. ಸಧ್ಯ ಲಭ್ಯವಿರುವ ಸಿಬ್ಬಂದಿ ಹಾಗೂ ತಜ್ಞ ವೈದ್ಯರ ಸಹಾಯದಿಂದ ಬರುವ ರೋಗಿಗಳ ಆರೈಕೆ ಮಾಡಲಾಗುತ್ತಿದೆ. ಕೆಲವರು ರಾಜೀನಾಮೆ ನೀಡಿದ್ದರೆ ಇನ್ನೂ ಕೆಲವರು ಗೈರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಲಾಗಿದೆ. ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಆಗಿರುವ ವ್ಯವಸ್ಥೆ ಸರಿಪಡಿಸಲಿದ್ದಾರೆ- ಡಾ.ಮುದಿಗೌಡರ, ಆಡಳಿತಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಜಮಖಂಡಿ