ಹಾನಗಲ್ಲದಲ್ಲಿ ಅಕ್ರಮ ಮದ್ಯ ಮಾರಾಟ ಬಂದ್ ಮಾಡಲು ಮಹಿಳೆಯರ ಆಗ್ರಹ

KannadaprabhaNewsNetwork | Published : Sep 26, 2024 11:33 AM

ಸಾರಾಂಶ

ಅನಧಿಕೃತ ಮದ್ಯ ಮಾರಾಟ ಬಂದ್ ಮಾಡುವಂತೆ ನೂರಾರು ಮಹಿಳೆಯರು ತಾಲೂಕು ಆಡಳಿತಕ್ಕೆ ಧಿಕ್ಕಾರ ಕೂಗುತ್ತ ವೇದಿಕೆಯತ್ತ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜರುಗಿತು.

ಹಾನಗಲ್ಲ: ಅನಧಿಕೃತ ಮದ್ಯ ಮಾರಾಟ ಬಂದ್ ಮಾಡುವಂತೆ ನೂರಾರು ಮಹಿಳೆಯರು ತಾಲೂಕು ಆಡಳಿತಕ್ಕೆ ಧಿಕ್ಕಾರ ಕೂಗುತ್ತ ವೇದಿಕೆಯತ್ತ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜರುಗಿತು.

ಜನಸ್ಪಂದನದಲ್ಲಿ ಅರ್ಜಿಗಳ ಕುರಿತು ವೇದಿಕೆಯಲ್ಲಿ ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳ ಬಗ್ಗೆ ಸಮಾಲೋಚಿಸುತ್ತಿರುವಾಗ ನೂರಾರು ಮಹಿಳೆಯರು ತಾಲೂಕು ಆಡಳಿತಕ್ಕೆ ಧಿಕ್ಕಾರದ ಘೋಷಣೆ ಕೂಗುತ್ತ ವೇದಿಕೆಯತ್ತ ನಡೆದು ಬಂದರು. ಹಾನಗಲ್ಲ ತಾಲೂಕಿನಲ್ಲಿ ಅನಧಿಕೃತ ಮದ್ಯ ಮಾರಾಟ ಬಂದ್ ಮಾಡಬೇಕು. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟಗಾರರೊಂದಿಗೆ ಹೊಂದಾಣಿಕೆ ವ್ಯವಹಾರ ಮಾಡುತ್ತಿದ್ದಾರೆ. ಲಂಚಕ್ಕೆ ಮಣೆ ಹಾಕುತ್ತಿದ್ದಾರೆ. ಅಬಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ. ಅಬಕಾರಿ ಇಲಾಖೆಯ ವೈಫಲ್ಯದಿಂದಲೇ ಈಗ ಪ್ರತಿ ಹಳ್ಳಿಯಲ್ಲಿ ಮದ್ಯ ಮಾರಾಟ ನಿರ್ಭೀತವಾಗಿ ನಡೆದಿದೆ ಎಂದು ದೂರಿ, ತಾಲೂಕು ಆಡಳಿತಕ್ಕೆ ಧಿಕ್ಕಾರ ಹೇಳಿದರು. ಶಾಸಕ ಶ್ರೀನಿವಾಸ ಮಾನೆ ಹಾಗೂ ಜಿಲ್ಲಾಧಿಕಾರಿ ತಕ್ಷಣ ಕ್ರಮ ಜರುಗಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ಅಧ್ಯಕ್ಷ ರುದ್ರಪ್ಪ ಬಳಿಗಾರ, ತಹಸೀಲ್ದಾರರು ರೈತ ಮುಖಂಡರ ಮನವಿಗೆ ಸ್ಪಂದಿಸುತ್ತಿಲ್ಲ. ಭೇಟಿಗೂ ಅವಕಾಶ ನೀಡುವುದಿಲ್ಲ. ರೈತರನ್ನು ನಿರ್ಲಕ್ಷಿಸುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ದೂರಿದರು. ಕೂಡಲೇ ಪ್ರತಿಕ್ರಿಯಿಸಿದ ಶಾಸಕ ಶ್ರೀನಿವಾಸ ಮಾನೆ, ಇನ್ನು ಮೇಲೆ ಪ್ರತಿದಿನ ಕಚೇರಿಯಲ್ಲಿ ಮಧ್ಯಾಹ್ನ ೩ರಿಂದ ೫.೩೦ರ ವರೆಗೆ ಕಡ್ಡಾಯವಾಗಿ ಸಾರ್ವಜನಿಕರ ಅಹವಾಲು ಕೇಳಬೇಕು. ಉಳಿದ ಸಮಯದಲ್ಲಿ ಕಚೇರಿ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್‌ ಎಸ್. ರೇಣುಕಮ್ಮ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ವಿಜಯಮಹಂತೇಶ ಮಾತನಾಡಿ, ತಹಸೀಲ್ದಾರರು ಕೆಲಸದ ಒತ್ತಡದಲ್ಲಿ ಹಾಗೆ ನಡೆದುಕೊಂಡಿರಬೇಕು. ಆದರೆ ಜಿಲ್ಲೆಯಲ್ಲಿಯೇ ಉತ್ತಮ ಕೆಲಸ ಮಾಡುತ್ತಿರುವ ತಹಸೀಲ್ದಾರ ಎಸ್. ರೇಣುಕಮ್ಮ. ಇನ್ನು ಮುಂದೆ ಹಾಗಾಗದಂತೆ ನಿಗಾವಹಿಸಲಾಗುವುದು ಎಂದು ಸಮಜಾಯಿಸಿ ಹೇಳಿದರು.

ಹುಬ್ಬಳ್ಳಿ ಶಿರಸಿ ರೈಲು ಮಾರ್ಗವನ್ನು ಅನತಿ ದೂರದ ಹಾನಗಲ್ಲಿಗೂ ಬರುವಂತೆ ಮಾಡಿ ಎಂದು ಉತ್ತರ ಕರ್ನಾಟಕ ಹೊರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ, ರೈತ ಸಂಘದ ಅಧ್ಯಕ್ಷ ಸದಾಗೌಡ ಪಾಟೀಲ ಜನಸ್ಪಂದನದಲ್ಲಿ ಒತ್ತಾಯಿಸಿದರು.

ಕೆರೆಯ ಕೋಡಿಗಳು ಮುಚ್ಚಿ ಹೋಗಿದ್ದು, ಇಲ್ಲಿನ ಕೆರೆಗಳ ಮೇಲಿನ ರೈತರ ಜಮೀನು ಮುಳುಗಡೆಯಾಗುತ್ತಿವೆ. ಕೂಡಲೇ ಇವುಗಳ ಸರ್ವೇ ಮಾಡಿ ಕೋಡಿ ಕಾಲುವೆ ನಿರ್ಮಿಸಬೇಕು. ಉಳಿದಂತೆ ಪಹಣಿ ಸಿಗುತ್ತಿಲ್ಲ, ಉತಾರದಲ್ಲಿ ಸರ್ಕಾರ ಎಂದು ನಮೂದಾಗಿರುವ ಸಮಸ್ಯೆ, ಸಕಾಲಿಕವಾಗಿ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಕೊಪ್ಪರಸಿಕೊಪ್ಪ ಗ್ರಾಮದ ೧೩ ಎಕರೆಗೂ ಅಧಿಕ ಇರುವ ಸರಕಾರಿ ಗಾವಠಾಣ ಒತ್ತುವರಿಯಾಗಿರುವುದನ್ನು ತೆರೆವುಗೊಳಿಸಬೇಕು. ಸಂಧ್ಯಾಸುರಕ್ಷಾ ಸಮಸ್ಯೆಗಳು ಸೇರಿದಂತೆ ಹಲವು ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಿದರು.

Share this article