ಭಟ್ಕಳ ತಾಲೂಕಿನ ಕಾಯ್ಕಿಣಿಯಲ್ಲಿ ಫ್ಲೈಒವರ್ ನಿರ್ಮಿಸಿ ಚತುಷ್ಪಥ ಕಾಮಗಾರಿ ಕೈಗೊಳ್ಳಲು ಆಗ್ರಹ

KannadaprabhaNewsNetwork |  
Published : Nov 28, 2024, 12:33 AM IST
ಭಟ್ಕಳದ ಕಾಯ್ಕಿಣಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಈ ರಸ್ತೆಯಲ್ಲಿ ರೈತರು, ವಿದ್ಯಾರ್ಥಿಗಳು ಹೀಗೆ ಸಾವಿರಾರು ಜನರು ತಿರುಗಾಡುತ್ತಾರೆ. ಉತ್ತರಕೊಪ್ಪ ರಸ್ತೆಗೆ ಫ್ಲೈಒವರ್ ಮಾಡದೇ ಇದ್ದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಲಿದೆ.

ಭಟ್ಕಳ: ತಾಲೂಕಿನ ಕಾಯ್ಕಿಣಿಯಲ್ಲಿ ಉತ್ತರಕೊಪ್ಪ ರಸ್ತೆಗೆ ಹೋಗಲು ಫ್ಲೈಒವರ್ ಮಾಡುವ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಸಾರ್ವಜನಿಕರು ಕಾಮಗಾರಿ ಮಾಡಲು ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರ್ಮಿಕರನ್ನು ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆದಿದೆ.

ಬುಧವಾರ ಬೆಳಗ್ಗೆ ಕಾಯ್ಕಿಣಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಾಕಿ ಇರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಮಾಡಲು ಪೊಲೀಸ್ ಬಂದೋಬಸ್ತನಲ್ಲಿ ಜೆಸಿಬಿ ಮತ್ತಿತರ ಯಂತ್ರಗಳೊಂದಿಗೆ ಕಾರ್ಮಿಕರನ್ನು ಕರೆತಂದಿದ್ದರು. ಸುದ್ದಿ ತಿಳಿಸಿದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಉತ್ತರಕೊಪ್ಪ ರಸ್ತೆ ಬಳಿ ಫ್ಲೈಒವರ್ ಮಾಡಿಕೊಟ್ಟು ಚತುಷ್ಪಥ ಕಾಮಗಾರಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಲ್ಲದೇ ಕೆಲಕಾಲ ಧರಣಿ ಕೂಡ ನಡೆಸಿದರು.

ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಶಿವಕುಮಾರ ಅವರು ಸ್ಥಳೀಯರ ಬಳಿ, ಇದೀಗ ನಮಗೆ ಹೆದ್ದಾರಿ ಕಾಮಗಾರಿ ಮಾಡಲು ಅವಕಾಶ ಕೊಡಿ. ಮಾರ್ಚ್ ಅಂತ್ಯದೊಳಗೆ ಎಲ್ಲೆಡೆ ಕಾಮಗಾರಿ ಪೂರ್ಣಗೊಳಿಸಬೇಕು. ನಿಮ್ಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಮಂಜೂರಿ ಆಗಿ ಬಂದ ನಂತರ ಮಾಡಿಕೊಡುತ್ತೇವೆ ಎಂದು ಹೇಳಿದರು.

ಆಗ ಪ್ರೊಜೆಕ್ಟ್ ಡೈರೆಕ್ಟರನ್ನು ತರಾಟೆಗೆ ತೆಗೆದುಕೊಂಡ ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಜಿಪಂ ಮಾಜಿ ಸದಸ್ಯ ಅಲ್ಬರ್ಟ್‌ ಡಿಕೋಸ್ತ, ಭಾಸ್ಕರ ನಾಯ್ಕ, ವಿಷ್ಣು ದೇವಡಿಗ ಮುಂತಾದವರು, ಕಳೆದ ಏಳು ವರ್ಷಗಳಿಂದ ಈ ಪ್ರದೇಶದಲ್ಲಿ ಫ್ಲೈಒವರ್ ಮಾಡಿ ಎಂದು ಆಗ್ರಹಿಸುತ್ತಲೇ ಬಂದಿದ್ದರೂ ಬೇಡಿಕೆ ಈಡೇರಿಸಿಲ್ಲ. ಈ ಬಗ್ಗೆ ಎಸಿ ಕಚೇರಿಯಲ್ಲಿ ಸಾಕಷ್ಟು ಸಭೆ ನಡೆದರೂ ಸ್ಪಂದಿಸಿಲ್ಲ. ಈಗ ಹೆದ್ದಾರಿ ಕಾಮಗಾರಿ ಮುಗಿಸಿದ ನಂತರ ಫ್ಲೈಒವರ್ ಮಾಡಿಕೊಡುತ್ತೇವೆಂದು ಹೇಳುತ್ತಿದ್ದೀರಿ. ನಿಮ್ಮ ಮೇಲೆ ನಮಗೆ ಭರವಸೆ ಇಲ್ಲ. ಫ್ಲೈಒವರ್ ಮಾಡಿದ ಬಳಿಕ ಹೆದ್ದಾರಿ ಕಾಮಗಾರಿ ಮುಂದುವರಿಸಿ. ಅಲ್ಲಿಯ ತನಕ ಕಾಮಗಾರಿ ಮಾಡುವುದು ಬೇಡ ಎಂದರು.

ಉತ್ತರಕೊಪ್ಪ ರಸ್ತೆಗೆ ಫ್ಲೈಒವರ್ ಮಾಡದೇ ಇದ್ದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಈ ರಸ್ತೆಯಲ್ಲಿ ರೈತರು, ವಿದ್ಯಾರ್ಥಿಗಳು ಹೀಗೆ ಸಾವಿರಾರು ಜನರು ತಿರುಗಾಡುತ್ತಾರೆ. ಫ್ಲೈಒವರ್ ಮಾಡದೇ ಹೆದ್ದಾರಿ ಕಾಮಗಾರಿ ಮಾಡಿದರೆ ಅಪಘಾತ ಹೆಚ್ಚಾಗಿ ಸಾವು- ನೋವು ಅಧಿಕವಾಗಲಿದೆ ಎಂದರು.

ಸ್ಥಳಕ್ಕೆ ಸಹಾಯಕ ಆಯುಕ್ತೆ ಡಾ. ನಯನಾ ಮತ್ತು ಡಿವೈಎಸ್ಪಿ ಅವರು ಭೇಟಿ ನೀಡಿ, ಜನರನ್ನು ಸಮಾಧಾನಪಡಿಸಲು ಯತ್ನಿಸಿ ಕಾಮಗಾರಿಗೆ ಅವಕಾಶ ಕೊಡಿ ಎಂದಾಗ, ಇದಕ್ಕೆ ಜನರು ಒಪ್ಪಿಗೆ ನೀಡಲಿಲ್ಲ. ಫ್ಲೈಒವರ್ ನಿರ್ಮಿಸಿ ಹೆದ್ದಾರಿ ಕಾಮಗಾರಿ ಮಾಡಿ ಎಂದು ಪಟ್ಟು ಹಿಡಿದರು.

ಕೊನೆಗೆ ಸಹಾಯಕ ಆಯುಕ್ತರು ಸ್ಥಳದಲ್ಲೇ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಪ್ರಮುಖರ ಸಭೆ ನಡೆಸಿದರೂ ಫಲಪ್ರದ ಆಗಲಿಲ್ಲ. ಮುಖಂಡರು ಮತ್ತು ಸಾರ್ವಜನಿಕರು ಫ್ಲೈಒವರ್ ಮಾಡಿಯೇ ಹೆದ್ದಾರಿ ಕಾಮಗಾರಿ ಮುಂದುವರಿಸಿ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ ಕಾಮಗಾರಿಗೆ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಅಧಿಕಾರಿಗಳು, ಕಾರ್ಮಿಕರು ಕೆಲಸ ಮುಂದುವರಿಸದೆ ವಾಪಸ್ಸಾದರು. ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಊರ ಪ್ರಮುಖರು ಸೇರಿದಂತೆ ನೂರಾರು ಜನರು ಸೇರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ