ತಾಲೂಕಾಸ್ಪತ್ರೆಯ ಮುಂದೆ ಹಂಪ್ಸ್‌ ನಿರ್ಮಿಸಲು ಒತ್ತಾಯ

KannadaprabhaNewsNetwork |  
Published : Dec 05, 2024, 12:33 AM IST
ಪೋಟೊ4ಕೆಎಸಟಿ2: ಕುಷ್ಟಗಿ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯ ಮುಂದೆ ಇರುವ ಮುಖ್ಯ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿರುವದು.4ಕೆಎಸಟಿ2ಎ: ಕುಷ್ಟಗಿ ಪಟ್ಟಣದ ತಾಲೂಕ ಆಸ್ಪತ್ರೆಯ ಹೊರನೋಟ. | Kannada Prabha

ಸಾರಾಂಶ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಇರುವ ಡಾಂಬರು ರಸ್ತೆಯಲ್ಲಿ ಹಂಪ್ಸ್‌(ರೋಡ್ ಬ್ರೇಕ್‌) ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವೇಗವಾಗಿ ವಾಹನಗಳ ಸಂಚಾರ । ಅಪಘಾತ ವಲಯವಾಗಿ ಮಾರ್ಪಟ್ಟ ರಸ್ತೆ । ಸಾರ್ವಜನಿಕರಲ್ಲಿ ಆತಂಕ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಇರುವ ಡಾಂಬರು ರಸ್ತೆಯಲ್ಲಿ ಹಂಪ್ಸ್‌(ರೋಡ್ ಬ್ರೇಕ್‌) ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ತಾಲೂಕಾಸ್ಪತ್ರೆಯು ಗಜೇಂದ್ರಗಡದ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು, ರಸ್ತೆ ಅಪಘಾತ ತಪ್ಪಿಸಲು ತಕ್ಷಣ ಇಲ್ಲಿ ಅಗತ್ಯ ಹಂಪ್ಸ್ ನಿರ್ಮಿಸಬೇಕು ಎನ್ನುವುದು ಜನತೆಯ ಬೇಡಿಕೆಯಾಗಿದೆ.

ಔಷಧ ತರಲು ಪರದಾಟ:

ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಅನೇಕ ಗ್ರಾಮಗಳ ಜನರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಸ್ಪತ್ರೆಯಲ್ಲಿ ಇರಲಾರದ ಕೆಲವು ಔಷಧಿಗಳನ್ನು ಹೊರಗಡೆ ಇರುವ ಖಾಸಗಿ ಮೆಡಿಕಲ್‌ಗಳಿಗೆ ಹೋಗಿ ತರುವುದು ಅನಿವಾರ್ಯ. ಆಗ ಮುಖ್ಯ ರಸ್ತೆಯನ್ನು ದಾಟಿ ಹೋಗಬೇಕಿದ್ದು, ಈ ರಸ್ತೆಯನ್ನು ದಾಟಲು ಮಹಿಳೆಯರು ಹಾಗೂ ವಯೋವೃದ್ಧರು ಪರದಾಡುತ್ತಾರೆ.

ಕಳೆದ ಎರಡು ವರ್ಷಗಳ ಹಿಂದಷ್ಟೆ ಡಾಂಬರು ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಈ ರಸ್ತೆಗಳಲ್ಲಿ ಮೊದಲಿದ್ದ ರೋಡ್‌ ಬ್ರೇಕ್‌ಗಳನ್ನು ಹಾಕದೆ ಹಾಗೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ವೇಗದಲ್ಲಿ ಸಂಚಾರ ಮಾಡುತ್ತಿವೆ.

ಇದೇ ರಸ್ತೆಯ ಮೂಲಕವಾಗಿ ಶಾಲಾ-ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಿದ್ದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಪಾದಾಚಾರಿಗಳಿಗೆ ಮುಖ್ಯ ರಸ್ತೆ ದಾಟಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಳರಸ್ತೆಗಳಿಂದ ಮುಖ್ಯ ರಸ್ತೆಗಳಲ್ಲಿ ವಾಹನಗಳ ವೇಗ ಹೆಚ್ಚಾಗುತ್ತಿದ್ದು, ಇಲ್ಲಿ ನಿರಂತರವಾಗಿ ದ್ವಿಚಕ್ರ, ತ್ರಿಚಕ್ರ ವಾಹನ, ಲಾರಿ, ಟ್ರ್ಯಾಕ್ಟರ್, ಬಸ್‌ಗಳು, ಸೇರಿದಂತೆ ಬೃಹತ್ ವಾಹನಗಳು ರಸ್ತೆಯಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತವೆ. ಅಲ್ಲದೇ ಹಂದಿ, ನಾಯಿಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತವೆ. ಇದರಿಂದಾಗಿ ಬೈಕ್ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಈ ಮುಖ್ಯ ರಸ್ತೆಯ ಪ್ರದೇಶ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ