ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಲು ಆಗ್ರಹ

KannadaprabhaNewsNetwork |  
Published : Jul 11, 2026, 02:00 AM IST
ಸುಧಾಕರ ಶೆಟ್ಟಿ ಮನವಿ | Kannada Prabha

ಸಾರಾಂಶ

ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ, ಮುತ್ತಿನಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಹರಿಹರಪುರ, ಶೃಂಗೇರಿ ರೈಲ್ವೆ ಮಾರ್ಗವನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಭಾರತೀಯ ರೈಲ್ವೆ ಮೈಸೂರು ವಿಭಾಗದ ವಿಭಾಗಿಯ ರೈಲ್ವೆ ವ್ಯವಸ್ಥೆ ಮಾಡಿ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಪ್ಪ:

ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ, ಮುತ್ತಿನಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಹರಿಹರಪುರ, ಶೃಂಗೇರಿ ರೈಲ್ವೆ ಮಾರ್ಗವನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಭಾರತೀಯ ರೈಲ್ವೆ ಮೈಸೂರು ವಿಭಾಗದ ವಿಭಾಗಿಯ ರೈಲ್ವೆ ವ್ಯವಸ್ಥೆ ಮಾಡಿ ಮನವಿ ಸಲ್ಲಿಸಿದರು.

ಪ್ರಸ್ತಾವಿತ ರೈಲ್ವೇ ಮಾರ್ಗದ ಶಿವಮೊಗ್ಗ ಪ್ರಮುಖ ವಾಣಿಜ್ಯ ನಗರವಾಗಿದ್ದರೆ, ಭದ್ರಾವತಿ ಕೈಗಾರಿಕಾ ನಗರವಾಗಿದೆ. ಎನ್.ಆರ್.ಪುರ ಸ್ವಾತಂತ್ರ್ಯ ಪೂರ್ವದಿಂದಲೂ ಶಿವಮೊಗ್ಗದೊಂದಿಗೆ ರೈಲ್ವೆ ಸಂಪರ್ಕ ಹೊಂದಿದ ಇತಿಹಾಸ ಹೊಂದಿದೆ. ಬಾಳೆಹೊನ್ನೂರಿನಲ್ಲಿ ವಿಶ್ವ ಪ್ರಸಿದ್ಧ ಶ್ರೀ ರಂಭಾಪುರಿ ಮಹಾಸಂಸ್ಥಾನ ಮಠವಿದೆ. ಕೊಪ್ಪ ಮಲೆನಾಡಿನ ಪ್ರಮುಖ ವಾಣಿಜ್ಯ, ಶಿಕ್ಷಣ ಮತ್ತು ಆಡಳಿತ ಕೇಂದ್ರವಾಗಿದೆ. ಹರಪುರದಲ್ಲಿ ಐತಿಹಾಸಿಕ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವಿದೆ. ಇನ್ನು ಶೃಂಗೇರಿಗೆ ಪ್ರತಿದಿನ ಹತ್ತಾರು ಸಾವಿರ ಜನ ಶ್ರೀ ಶಾರದಾ ಪೀಠಕ್ಕೆ ಆಗಮಿಸುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ರೈಲ್ವೆ ಯೋಜನೆ ಆರಂಭಿಸುವುದು ಅತಿ ಸೂಕ್ತ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರ ಕರ್ನಾಟಕದ ಅತ್ಯಂತ ಸುಂದರವಾದ ಮಲೆನಾಡು ಪ್ರದೇಶವಾಗಿದ್ದರೂ, ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಹಿಂದುಳಿದಿದೆ. ಈ ಭಾಗಕ್ಕೆ ರೈಲ್ವೆ, ವಿಮಾನ ಸಂಪರ್ಕವೇ ಇಲ್ಲ. ಇದೇ ಕಾರಣದಿಂದ ಕೈಗಾರಿಕಾ ವಲಯಗಳು ದೊಡ್ಡ ದೊಡ್ಡ ಕೈಗಾರಿಕೆಗಳು ಮಾಹಿತಿ ತಂತ್ರಜ್ಞಾನ ಅಥವಾ ಸಾಪ್ಟ್‌ವೇರ್ ಕಂಪನಿಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಯಾವುದೇ ಸಾರಿಗೆ ಸೌಕರ್ಯ ಇಲ್ಲದಿರುವುದರಿಂದ ಪ್ರತಿವರ್ಷ ಶಿಕ್ಷಣ ಪೂರ್ಣಗೊಳಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಯುವ ಜನತೆ ಉದ್ಯೋಗ ಅರಸಿ ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಹೊಸ ರೈಲ್ವೆ ಮಾರ್ಗ ನಿರ್ಮಾಣಗೊಂಡರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪ್ರತಿದಿನ ದೊಡ್ಡ ದೊಡ್ಡ ನಗರಗಳಿಗೆ ತೆರಳಬಹುದಾಗಿದೆ. ಅಲ್ಲದೆ ರೋಗಿಗಳು ಕಡಿಮೆ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರುವ ನಗರಗಳಿಗೆ ತೆರಳಬಹುದಾಗಿದೆ. ಇನ್ನು ರೈತರು ತಾವು ಬಡಿತ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಸುಲಭವಾಗಿ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ.

ರೈಲ್ವೆ ಯೋಜನೆಯಿಂದ ದೇಶದ ವಿವಿಧ ಭಾಗಗಳ ಹೂಡಿಕೆದಾರರು ಮಲೆನಾಡಿನಲ್ಲಿ ತಮ್ಮ ಉದ್ಯಮ ಆರಂಭಿಸಲು ಮುಂದೆ ಬರುತ್ತಾರೆ. ಪ್ರಮುಖವಾಗಿ ಅಡಕೆ ಕಾಫಿ ಕಾಳು ಮೆಣಸು ಅರಿಶಿನ ಮುಂತಾದ ಉತ್ಪನ್ನಗಳ ಮೌಲ್ಯವರ್ಧಿತ ಸಂಸ್ಕರಣ ಘಟಕಗಳು, ಗೋದಾಮುಗಳು, ಲಾಜಿಸ್ಟಿಕ್ ಪಾರ್ಕ್‌ಗಳು ಸ್ಥಾಪನೆಗೊಳ್ಳುತ್ತವೆ. ಇದರಿಂದ ಮಲೆನಾಡಿನ ಆರ್ಥಿಕ ಚಿತ್ರಣವೇ ಬದಲಾಗುತ್ತದೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಧಾರ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ಸಿಗಲಿದೆ ಎಂದು ವಿವರಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಲಿಂಗರಾಜು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಕಾರ್ಯಕ್ಕೆ ಪಕ್ಷದ ಬಿಎಲ್‌ಎಗಳಿಗೆ ಜವಾಬ್ದಾರಿ
ಪೋಷಕರ ಸ್ಮರಣಾರ್ಥ ಶಾಲಾ ಆವರಣದಲ್ಲಿ ಬಲಮುರಿ ಗಣಪತಿ ದೇವಾಲಯ ನಿರ್ಮಾಣ