ನಕಲಿ ಪತ್ರಕರ್ತರ ಹಾವಳಿ ಕಡಿವಾಣಕ್ಕೆ ಒತ್ತಾಯ

KannadaprabhaNewsNetwork |  
Published : Jan 31, 2025, 12:46 AM IST
30ಎಚ್‌ಪಿಟಿ2-ಹೊಸಪೇಟೆಯಲ್ಲಿ ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಇದ್ದರು. | Kannada Prabha

ಸಾರಾಂಶ

ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿರುವುದರಿಂದ ಕಾರ್ಯನಿರತ ಪತ್ರಕರ್ತರು ಮುಕ್ತವಾಗಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ.

ಹೊಸಪೇಟೆ: ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿರುವುದರಿಂದ ಕಾರ್ಯನಿರತ ಪತ್ರಕರ್ತರು ಮುಕ್ತವಾಗಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಈ ಕುರಿತು ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸರ್ಕಾರಿ ಹಾಗೂ ಸಂಘ, ಸಂಸ್ಥೆಗಳ ಕಾರ್ಯಕ್ರಮದಲ್ಲೂ ನಕಲಿ ಪತ್ರಕರ್ತರು ಮುಂಚೂಣಿಯಲ್ಲಿದ್ದು, ಮುದ್ರಣ ಹಾಗೂ ದೃಶ್ಯ ಮಾಧ್ಯಮದ ವರದಿಗಾರರ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ. ನಕಲಿ ಪತ್ರಕರ್ತರನ್ನು ಪ್ರಶ್ನಿಸುವ ನೈಜ ಪತ್ರಕರ್ತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವಂತಹ ಹುನ್ನಾರ ನಡೆದಿದೆ. ಇದನ್ನು ಖಂಡಿಸುವ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿದರು.

ಜ.27ರಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕೃತ ಪತ್ರಕರ್ತರು ಮಾತ್ರ ಸಭೆಯಲ್ಲಿರುವಂತೆ ಸಚಿವರು ಸೂಚಿಸಿದಾಗಲೂ ಕೆಲ ನಕಲಿ ಪತ್ರಕರ್ತರು ಸಭೆಯುದ್ದಕ್ಕೂ ನಿರಂತರವಾಗಿ ವಿಡಿಯೋ ಮಾಡುತ್ತಾ, ತಿರುಗಾಡುತ್ತಿದ್ದರೂ, ಅಧಿಕಾರಿಗಳು ಚಕಾರವೆತ್ತಿಲ್ಲ. ಜಿಲ್ಲಾಡಳಿತದ ಇತ್ತೀಚಿನ ನಡೆಗಳು ಪರೋಕ್ಷವಾಗಿ ನಕಲಿ ಪತ್ರಕರ್ತರಿಗೆ ಪ್ರೋತ್ಸಾಹಿಸುವಂತಿವೆ. ಇದು ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪತ್ರಕರ್ತರು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕು. ಪತ್ರಿಕಾ ಭವನದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂಥವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ಈ ವಿಚಾರದಲ್ಲಿ ಮೀನಮೇಷ ಎಣಿಸಿದರೆ ಮುಂದೆ ನಡೆಯಲಿರುವ ಸರ್ಕಾರಿ ಸಭೆ, ಸಮಾರಂಭ ಸೇರಿದಂತೆ ಹಂಪಿ ಉತ್ಸವದಲ್ಲಿ ನೈಜ ಪತ್ರಕರ್ತರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಪತ್ರಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಕೂಡ ಇದ್ದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಪತ್ರಕರ್ತರಾದ ಮನೋಹರ್, ರೇಖಾ ಪ್ರಕಾಶ್, ಎಚ್.ವೆಂಕಟೇಶ್, ಸಾಕ್ಷಿ ಶ್ರೀನಿವಾಸ್‌, ಸುರೇಶ ಚವ್ಹಾಣ್, ಅನಂತ ಜೋಶಿ, ವೀರೇಂದ್ರ ನಾಗಲದಿನ್ನಿ, ಕೆ.ಬಿ. ಖವಾಸ್, ಎಂ.ಜಿ. ಬಾಲಕೃಷ್ಣ ಭಟ್, ಮಂಜುನಾಥ ಅಯ್ಯಸ್ವಾಮಿ, ಜಯಪ್ಪ ರಾಥೋಡ್, ಭೀಮಾ ನಾಯ್ಕ, ಭೀಮೇಶ, ಸಂಜೀವ, ಶಿವಾನಂದ, ಮಂಜುನಾಥ ಹಿರೇಮಠ, ವಿಜಯಕುಮಾರ್, ವೀರೇಶ್ ಎಂ.ಬಿ. ಪಾಂಡುರಂಗ ಜಂತ್ಲಿ, ಮೃತ್ಯುಂಜಯ, ವೀರಭದ್ರಪ್ಪ, ಅನೂಪಕುಮಾರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ