ಶಿರಹಟ್ಟಿ: ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂಘಟನೆ ಅಧ್ಯಕ್ಷ ಸಂತೋಷ ಕುರಿ ಮಾತನಾಡಿ, ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡಬೇಕು. ಗೋವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಕೃಷಿ ಹಾಗೂ ಹಾಲು ಉತ್ಪಾದನೆಯ ಮೂಲಕ ಜನರ ಜೀವನಕ್ಕೆ ಮಹತ್ವದ ಕೊಡುಗೆ ನೀಡುತ್ತದೆ. ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸುವುದು ಅಗತ್ಯವಾಗಿದೆ ಎಂದರು.ಗೋಮಾತೆಯನ್ನು ರಕ್ಷಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಕಾರ್ಯವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಗೋಹತ್ಯೆ ಸಂಪೂರ್ಣವಾಗಿ ನಿಷೇಧಿಸಿ ಗೋಸಂರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಗೋವಿನಲ್ಲಿ ಮೂರು ಕೋಟಿ ದೇವತೆಗಳು ಇರುವುದಾಗಿ ಹಿಂದೂಗಳು ನಂಬುತ್ತಾರೆ. ರೈತರ ಜೀವನಕ್ಕೆ ಮುಖ್ಯ ಆಧಾರ ಗೋವುಗಳಾಗಿವೆ ಎಂದರು.ಮುಖಂಡರಾದ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುವುದಕ್ಕೆ ಭರವಸೆ ನೀಡಿದ ಇದುವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಜಾರಿಗೆ ತರದೇ ಇರುವುದು ದುರಂತದ ಸಂಗತಿಯಾಗಿದೆ. ಪ್ರತಿಯೊಂದು ಮನೆಯಲ್ಲೂ ಗೋವುಗಳನ್ನು ಸಾಕಾಣಿಕೆ ಮಾಡಬೇಕು. ಗೋವುಗಳನ್ನು ರಕ್ಷಿಸಬೇಕು. ಗೋಹತ್ಯೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಗೋಸಂತತಿಯನ್ನು ದೇಶದಲ್ಲಿ ಉಳಿಸಿಕೊಳ್ಳುವುದಕ್ಕೆ ಪ್ರಬಲವಾದ ಕಾನೂನು ಜಾರಿಗೆ ತಂದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.