ಹಾವೇರಿ, ಬ್ಯಾಡಗಿ ತಾಲೂಕು ಬರ ಘೋಷಣೆಗೆ ಆಗ್ರಹ

KannadaprabhaNewsNetwork |  
Published : Sep 13, 2026, 02:30 AM IST
ಹಾವೇರಿ ಮತ್ತು ಬ್ಯಾಡಗಿ ತಾಲುಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ನಗರದಲ್ಲಿ ಸಚಿವ ರುದ್ರಪ್ಪ ಲಮಾಣಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು ಈ ಬಾರಿ ಮುಂಗಾರು ವೈಫಲ್ಯದಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ತಕ್ಷಣ ಸಂಪೂರ್ಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.

ಹಾವೇರಿ: ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು ಈ ಬಾರಿ ಮುಂಗಾರು ವೈಫಲ್ಯದಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ತಕ್ಷಣ ಸಂಪೂರ್ಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಶನಿವಾರ ನಗರದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡರು, ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸದ್ಯ ಯಾವುದೇ ಕೆರೆಗಳಲ್ಲಿ ಸಮರ್ಪಕವಾಗಿ ನೀರಿಲ್ಲ. ಬೋರ್‌ವೆಲ್‌ಗಳು ಕೂಡ ಬತ್ತಿಹೋಗಿದ್ದು, ಕೃಷಿಗೆ ನೀರಿನ ಕೊರತೆ ಎದುರಾಗಿದೆ. ಮುಂಗಾರು ಮಳೆ ವೈಫಲ್ಯದಿಂದ ರೈತರು ಎರಡು ಬಾರಿ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗಿ ನಾಶವಾಗಿವೆ ಎಂದು ದೂರಿದರು.

ಕೆಲವು ಕಡೆ ಬೆಳೆ ಹಸಿರಾಗಿ ಕಾಣಿಸಿಕೊಂಡರೂ ಮೆಕ್ಕೆಜೋಳ ತೆನೆ ಬಿಟ್ಟಿಲ್ಲ, ಕಾಳು ಕಟ್ಟಿಲ್ಲ. ಹತ್ತಿ, ಸೋಯಾಬಿನ್ ಹಾಗೂ ಮೆಕ್ಕೆಜೋಳ ಬೆಳೆಗಳು ಮಳೆ ಕೊರತೆಯಿಂದ ತೀವ್ರ ಹಾನಿಗೊಳಗಾಗಿವೆ. ರಾಜ್ಯ ಸರಕಾರ 102 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದ್ದು, ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ. ಪಕ್ಕದ ದಾವಣಗೆರೆ, ಶಿವಮೊಗ್ಗ, ಧಾರವಾಡ ಹಾಗೂ ಗದಗ ಜಿಲ್ಲೆಗಳನ್ನು ಬರಪೀಡಿತವೆಂದು ಘೋಷಿಸಿರುವ ಸಂದರ್ಭದಲ್ಲಿ ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯನ್ನು ಕಡೆಗಣಿಸಿರುವುದು ನ್ಯಾಯಸಮ್ಮತವಲ್ಲ. ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳು ಬರಪೀಡಿತವಲ್ಲ ಎಂದು ಯಾವ ಮಾನದಂಡದ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಹಾವೇರಿ ಮತ್ತು ಬ್ಯಾಡಗಿ ತಾಲೂಕುಗಳನ್ನು ತಕ್ಷಣ ಬರಪೀಡಿತವೆಂದು ಘೋಷಿಸಿ ಕೃಷಿ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳ ಬಲವಂತದ ಸಾಲ ವಸೂಲಾತಿಯನ್ನು ಸ್ಥಗಿತಗೊಳಿಸಬೇಕು. ಕೇಂದ್ರ ಸರಕಾರದಿಂದ ಪ್ರತಿ ಎಕರೆಗೆ 25 ಸಾವಿರ ರು. ಬೆಳೆನಷ್ಟ ಪರಿಹಾರ ನೀಡಬೇಕು. ಜಿಲ್ಲೆಯ ಸಚಿವರು ಹಾಗೂ ಶಾಸಕರು ಸರಕಾರದ ಮುಂದೆ ವಿಷಯ ಮಂಡಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲೆಯ ಆರು ಶಾಸಕರ ಮನೆಗಳ ಮುಂದೆ ಎತ್ತು, ಎಮ್ಮೆ, ಆಕಳು, ದನ-ಕರುಗಳನ್ನು ಕಟ್ಟಿ ಹಾಕಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮೌನೇಶ ಕಮ್ಮಾರ, ಶಿವಯೋಗಿ ಹೊಸಗೌಡ್ರ, ಶಿದ್ಲಿಂಗಪ್ಪ ಬಳ್ಳಾರಿ, ಸುರೇಶ ಚಲವಾದಿ, ಎಂ.ಜಿ. ಹಾವೇರಿಮಠ, ಮಲ್ಲಿಕಸಾಬ ಬಿಜಾಪುರ, ಜಾನ್ ಪುನಿತ್, ವಿರುಪಾಕ್ಷಪ್ಪ ಗುಡಗೂರ, ಪರಮೇಶ ನಾಯಕ, ರಾಜು ಬಟ್ಟಲಕಟ್ಟಿ, ಕರಿಯಪ್ಪ ರೆಡ್ಡಿ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಪದಾಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಗಣೇಶೋತ್ಸವದ ಸಂಭ್ರಮ; ಡಿಜೆ ನಿಷೇಧಕ್ಕೆ ಅಸಮಾಧಾನ
ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ: ಮಾಜಿ ಸಂಸದ ಸಂಗಣ್ಣ ಕರಡಿ