ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಬೆಳಗ್ಗೆ ಚಂದನ ಪಾರ್ಕ್‌ನಿಂದ ಗೋಪಾಳದ ಅಂಚೆ ಕಚೇರಿವರೆಗೂ ಮೆರವಣಿಗೆಯಲ್ಲಿ ಬಂದು ಘೋಷಣೆ ಕೂಗಿ ಅಂಚೆಡಬ್ಬಿಗೆ ಮುಖ್ಯ ಮಂತ್ರಿಗಳಿಗೆ ಬರೆದ ಪತ್ರ ಹಾಕಿದರು.
ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು, ಶಿವಮೊಗ್ಗ ಮಧ್ಯ ಕರ್ನಾಟಕದ ಪ್ರಮುಖ ಸ್ಥಳವಾಗಿದ್ದು, ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೇಂದ್ರಸ್ಥಾನವಾಗಿದೆ. ಈಗಾಗಲೇ ಇಲ್ಲಿ ವಿವಿಧ ಬಗೆಯ 18 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುತ್ತದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದ್ದುದಲ್ಲದೇ ಆ ಪೀಠಕ್ಕೆ ಶಿವಮೊಗ್ಗವನ್ನೂ ಸೇರಿಸಲಾಗಿದೆ. ಇದು ಸರಿಯಲ್ಲ, ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರ್ಪಡೆಯಾದರೆ ಮಧ್ಯ ಕರ್ನಾಟಕದಿಂದ ಮಂಗಳೂರಿಗೆ ಸರಿಯಾದ ರಸ್ತೆ ಸಂಪರ್ಕವಾಗಲಿ, ಸಂಚಾರ ಸೌಲಭ್ಯವಾಗಲಿ ಇಲ್ಲದಿರುವ ಕಾರಣ ಇಲ್ಲಿನ ಕಕ್ಷಿದಾರರಿಗೆ, ಸಾರ್ವಜನಿಕರಿಗೆ ಮಂಗಳೂರಿಗೆ ಹೋಗಿ ಬರಲು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸುವುದು ಒಳಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.ಶಿವಮೊಗ್ಗ ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಲಿ ಬೆಂಗಳೂರಿನ ಹೈಕೋರ್ಟ್‍ನಲ್ಲಿ ಶಿವಮೊಗ್ಗದ ವಕೀಲರ ಸಂಖ್ಯೆಯೂ ಹೆಚ್ಚಿದೆ, ಎಲ್ಲಾ ಪ್ರಕರಣಗಳನ್ನು ಹೆಚ್ಚಾಗಿ ಇವರೇ ನೋಡಿಕೊಳ್ಳುತ್ತಿದ್ದು, ಮಂಗಳೂರಿನ ಪೀಠಕ್ಕೆ ಶಿವಮೊಗ್ಗವನ್ನು ಸೇರಿಸಿದರೆ ಇಲ್ಲಿಯ ವಕೀಲರೇ ಮಂಗಳೂರಿಗೆ ತೆರಳಿ ಪ್ರಕರಣ ನಡೆಸುವುದು ದುಸ್ತರವಾಗುತ್ತದೆ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ಪಾರ್ಕಿನ ಗೌರವ ಅಧ್ಯಕ್ಷ ಕಲಗೋಡು ರತ್ನಾಕರ್, ಕಾರ್ಯದರ್ಶಿ ಗುರುರಾಜ್ ಎಲ್., ಕ್ರೀಡಾ ಕಾರ್ಯದರ್ಶಿ ಜಿ.ಎಸ್, ಶಿವಕುಮಾರ್, ಪ್ರಮುಖರಾದ ರುದ್ರೇಶ್, ಆಶೋಕ್, ಮಣಿ, ಪ್ರಭಾಕರ್, ಶಾಂತಕ್ಕ, ರಂಗೇಗೌಡರು, ಶ್ರೀಧರ್, ಸುಧಾಕರ್, ಮಂಜುನಾಥ್, ನೂರ್ ಜಹಾನ್, ಶಾಂತಯ್ಯ, ರಾಘು, ಸೇರಿದಂತೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪತ್ರಕ್ಕೆ 50ಕ್ಕೂ ಹೆಚ್ಚು ಜನರು ಸಹಿ ಹಾಕಿದರು.