ನರಗುಂದ ತಾಲೂಕು ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರವೇ ಸಂಘಟನೆಯವರು ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿದರು.
ನರಗುಂದ: ತಾಲೂಕು ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರವೇ ಸಂಘಟನೆಯವರು ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿದರು.
ಆನಂತರ ಕರವೇ ತಾಲೂಕಾಧ್ಯಕ್ಷ ನಬಿಸಾಬ ಕಿಲ್ಲೇದಾರ ಮಾತನಾಡಿ, ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಇತರೆ ಸಿಬ್ಬಂದಿಗಳ ಖಾಲಿ ಹುದ್ದೆಯನ್ನು ಸರ್ಕಾರ ಭರ್ತಿ ಮಾಡದ್ದರಿಂದ ತಾಲೂಕಿನ ಜನತೆಗೆ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಸಿಗುತ್ತಿಲ್ಲ. ಮೇಲಾಗಿ ನಾವು ಹಲವಾರು ಬಾರಿ ನಮ್ಮ ಸಂಘಟನೆಯಿಂದ ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿಕೊಂಡರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಮತ್ತು ಇತರೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸದ್ದರಿಂದ ಜನತೆ ಪರದಾಟ ಮಾಡುವ ಸ್ಥಿತಿ ಬಂದಿದೆ. ಆದ್ದರಿಂದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ್ ಅವರು ಕೇವಲ ನಗರ ಪ್ರದೇಶದ ಆಸ್ಪತ್ರೆಗಳಿಗೆ ಭೇಟಿ ನೀಡಿದರೆ ಸಾಲದು, ಗ್ರಾಮೀಣ ಭಾಗದ ಆಸ್ಪತ್ರೆಗೆ ಸಚಿವರು ಭೇಟಿ ನೀಡಿ ಇಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಂದಾಗಬೇಕು. ಇಂದು ಸಿಬ್ಬಂದಿ ಕೊರತೆಯಿಂದ ನರಗುಂದ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಎನ್ನುವುದು ಮಾಯವಾಗಿದೆ ಎಂದು ಆರೋಪಿಸಿದರು. ಸರ್ಕಾರ ಬೇಗ ಖಾಲಿರುವ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ನಾವು ಆಸ್ಪತ್ರೆಗೆ ಕೀಲಿ ಜಡಿದು ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಉಪತಹಸೀಲ್ದಾರ್ ಪರಶುರಾಮ ಕಲಾಲ ಕರವೇ ಸಂಘಟನೆಯವರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು. ಕರವೇ ಪದಾಧಿಕಾರಿಗಳಾದ ವಿಜಯ ಬಡಿಗೇರ, ಮಾಲಾ ಪಾಟೀಲ, ಉಮೇಶ ದೊಡಮನಿ, ಮುತ್ತು ಸುರಕೋಡ, ಅಲ್ಲಾಭಕ್ಷ ಮುಲ್ಲಾ, ಇಮಾಮಸಾಬ ಕುಷ್ಟಗಿ, ಸಾಹೇಮಸಾಬ ಶೇಖ, ಹಜರತ ನಾಲಬಂದ, ರಿಯಾಜ ಕಿಲ್ಲೇದಾರ, ದಾವಲ ಮೊರಬ, ಫಕ್ರು ಜೋರಂ ಸೇರಿದಂತೆ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.