ಸಹಾಯಕ ಆಯುಕ್ತೆ ಕಾವ್ಯರಾಣಿ, ಪುರಸಭೆಯ ಮುಖ್ಯಾಧಿಕಾರಿಗೆ ಗ್ರಾಮಸ್ಥರ ಮನವಿಕನ್ನಡಪ್ರಭ ವಾರ್ತೆ ಭಟ್ಕಳ
ಆಸರಕೇರಿಯ ಗುರುಮಠ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ ಅವರ ನೇತೃತ್ವದಲ್ಲಿ ಸಹಾಯಕ ಆಯುಕ್ತ ಕಚೇರಿಗೆ ತೆರಳಿ ಸಹಾಯಕ ಆಯುಕ್ತೆ ಕಾವ್ಯರಾಣಿ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಅಹವಾಲು ವಿವರಿಸಿದರು.
ಆಸರಕೇರಿಯ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ದಿನಂಪ್ರತಿ ನೂರಾರು ಜನರು ಸಂಚರಿಸುತ್ತಾರೆ. ಮಳೆಗಾಲ ಮುಗಿಯುತ್ತಾ ಬಂದರೂ ಸಹ ಆಸರಕೇರಿ ರಸ್ತೆಯ ಒಳಚರಂಡಿ(ಡ್ರೈನೇಜ್) ಹೊಲಸು ನೀರು ರಸ್ತೆಯ ಮೇಲೆ ಬರುವುದು ಕಡಿಮೆಯಾಗಲಿಲ್ಲ. ಇಲ್ಲಿನ ರಸ್ತೆಯು ತುಂಬಾ ಹದಗೆಟ್ಟು ಹೊಂಡಮಯವಾಗಿದೆ. ಹಲವಾರು ಬಾರಿ ಆಸರಕೇರಿ ಗ್ರಾಮಸ್ಥರು ಪುರಸಭೆ ಮತ್ತಿತರ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಈಗಾಗಲೇ ಆಸರಕೇರಿಯಲ್ಲಿ ಒಳಚರಂಡಿ ನೀರು ಕುಡಿಯುವ ಬಾವಿಗೆ ಸೇರಿದ್ದು ಊರಿನ ಹಲವು ಮಕ್ಕಳು ರೋಗ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಹಲವರು ರೋಗ ಪೀಡಿತರಾಗಿತ್ತಾರೆ. ಈ ಬಗ್ಗೆ ನಿರ್ಲಕ್ಷ್ಯವಹಿಸಲಾಗಿದೆ. ಅಕ್ಟೋಬರ್ 22ರಿಂದ ದೇವಸ್ಥಾನದ ಸಂಚಾರಿ ಭಜನೆ ಪ್ರಾರಂಭವಾಗಲಿದ್ದು ಒಳ ಚರಂಡಿ(ಡ್ರೈನೇಜ್) ನೀರು ರಸ್ತೆ ಮೇಲೆ ಬರದಂತೆ ತಡೆದು ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಿಸಿ ಸರಿಪಡಿಸಿಕೊಡಬೇಕಿದೆ. ಒಂದು ವಾರದ ಒಳಗೆ ಈ ಸಮಸ್ಯೆ ನಿವಾರಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಗುರುಮಠ ದೇವಸ್ಥಾನದ ಉಪಾಧ್ಯಕ್ಷ ಎಂ.ಕೆ. ನಾಯ್ಕ, ಪ್ರಮುಖರಾದ ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ವೆಂಕಟೇಶ ನಾಯ್ಕ, ವಿಠ್ಠಲ್ ನಾಯ್ಕ, ಪ್ರಕಾಶ ನಾಯ್ಕ,ಮಹಾಬಲೇಶ್ವರ ನಾಯ್ಕ, ಶ್ರೀಕಾಂತ ನಾಯ್ಕ, ಯುವಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಗಣಪತಿ ನಾಯ್ಕ, ಶಶಿಧರ ನಾಯ್ಕ, ಸುಧಾಕರ ನಾಯ್ಕ ಮುಂತಾದವರಿದ್ದರು.