ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ಟೇಕಲ್ ಹಾಗೂ ಮಾಸ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡುವ ಮೂಲಕ ಬಡ ಕಾರ್ಮಿಕರ ಜೀವವನ್ನು, ರೈತರು ಬೆಳೆದ ಬೆಳೆಯನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ, ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಮಾಲೂರು ತಾಲೂಕಿನ ಟೇಕಲ್ , ಮಾಸ್ತಿ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ನಿಷೇಧಿತ ಜಿಲೆಟಿನ್ ಸಿಡಿಮದ್ದುಗಳನ್ನು ಉಪಯೋಗಿಸಿ ಕಾರ್ಮಿಕರ ಬಲಿ ಪಡೆಯುತ್ತಿದ್ದರೂ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ಖಂಡನೀಯವಾಗಿದೆ. ಅಧಿಕಾರಿಗಳು, ರಾಜಕಾರಣಿಗಳ ಕಪಿಮುಷ್ಟಿಯಲ್ಲಿರುವುದರಿಂದ ಬಡ ಕಾರ್ಮಿಕರ ಜೀವ ಬಲಿ ಪಡೆಯುತ್ತಿದ್ದಾರೆ ಎಂದು ಅಪಾದಿಸಿದರು.
ನೂರಾರು ಕೋಟಿ ತೆರಿಗೆ ವಂಚನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬ ಪ್ರಶ್ನೆಗೆ ಉತ್ತರಿಸುವರು ಯಾರು ಎಂದ ನಾರಾಯಣಗೌಡರು, ಪ್ರತಿ ತಿಂಗಳು ಒಂದಲ್ಲಾ ಒಂದು ಗಣಿಗಾರಿಕೆಯಲ್ಲಿ ಬಡವರ ದೇಹ ಛಿದ್ರ ಛಿದ್ರವಾಗುತ್ತಿದ್ದರೂ ನೆಪ ಮಾತ್ರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿರುವುದು ಕಾನೂನು ವಿಫಲತೆಯ ಉದಾಹರಣೆಯಾಗಿದೆ ಎಂದರು.ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ಅಧಿಕಾರಿಗಳ ಸಂಚಿನಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಒಂದು ಕಡೆ ಬಡವರ ಬದುಕನ್ನು ಬಲಿ ಪಡೆಯುತ್ತಿದ್ದರೆ, ಮತ್ತೊಂದುಕಡೆ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗಳು ಕಲ್ಲು ಗಾಣಿಗಾರಿಕೆಯ ಧೂಳಿನಿಂದ ಹಾಳಾಗುತ್ತಿವೆ , ಅವೈಜ್ಞಾನಿಕವಾಗಿ ಕ್ರಷರ್ ಗಳು ಸಿಡಿಸುತ್ತಿರುವ ಮದ್ದುಗುಂಡಿನಿಂದ ಗ್ರಾಮದ ಬಹುತೇಕ ಮನೆಗಳು ಬಿರುಕು ಬೀಳುತ್ತಿದ್ದು, ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ತಾಲೂಕಿನ ಗಣಿಗಾರಿಕೆ ನಡೆಯುತ್ತಿರುವ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹೀಗಿದ್ದರೂ ರಾಜಕೀಯ ವ್ಯಕ್ತಿಗಳ ಗುಲಾಮರಂತೆ ಕರ್ತವ್ಯ ನಿರ್ವಹಿಸುತ್ತಿರುವ ಇಲ್ಲಿನ ಅಧಿಕಾರಿಗಳ ವರ್ತನೆ ನಾಚೀಗೇಡಿನ ಸಂಗತಿಯಾಗಿದೆ ಎಂದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ರೂಪ ಅವರು, ಈ ಕೂಡಲೇ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹರೀಶ್ ,ರೂಪೇಶ್ ,ಮಾವೆ.ಪ್ರಕಾಶ್ ,ಹರ್ಷ,ಗಿರೀಶ್,ಪುತ್ತೇರಿರಾಜು,ಮಂಗಸಂದ್ರ ತಿಮ್ಮಣ್ಣ ಇನ್ನಿತರರು ಇದ್ದರು.