ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಇತ್ತಿಚೆಗೆ ಗೌರಿಬಿದನೂರಿನ ಹಿರಿಯ ವಕೀಲರಾದ ಸಣ್ಣಕ್ಕಿ ವಂಕಟರಾಮಯ್ಯ ಮತ್ತು ಬೆಂಗಳೂರಿನ ವ್ಹೈಟ್ ಫೀಲ್ಡ್ ನಲ್ಲಿ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮಧುಗಿರಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಪಟ್ಟಣದಲ್ಲಿ ಮಂಗಳವಾರ ಬೈಕ್ ಮೆರವಣಿಗೆ ನಡೆಸಿದರು.ನ್ಯಾಯಾಲಯಗಳಿಂದ ಹೊರಗುಳಿದು ಪ್ರತಿಭಟಿಸಿದ ವಕೀಲರು ಉಪವಿಭಾಗಾಧಿಕಾರಿ ಕಚೇರಿ ಗ್ರೇಡ್ 2 ತಹಸೀಲ್ದಾರ್ ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಇತ್ತಿಚೆಗೆ ಗೌರಿಬಿದನೂರಿನ ಹಿರಿಯ ವಕೀಲರಾದ ಸಣ್ಣಕ್ಕಿ ವಂಕಟರಾಮಯ್ಯ ಮತ್ತು ಬೆಂಗಳೂರಿನ ವ್ಹೈಟ್ ಫೀಲ್ಡ್ ನಲ್ಲಿ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಆಗಾಗ್ಗೆ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಸರ್ಕಾರ ಸೂಕ್ತ ರಕ್ಷಣೆ ಒದಗಿಸದೆ ಮೀನಾಮೇಶ ಎಣಿಸುತ್ತಿದೆ. ಅಲ್ಲದೆ ಸಂರಕ್ಷಣಾ ಕಾಯ್ದೆ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ವಕೀಲರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕಗೆ ಕೊನೆಗಾಣಿಸಬೇಕು. ಇಲ್ಲದಿದ್ದರೆ ರಾಜ್ಯಾದಾದ್ಯಂತ ಎಲ್ಲ ಕೋರ್ಟಗಳಲ್ಲಿ ಕಲಾಪ ಬಹಿಷ್ಕರಿಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ವಕೀಲರು ಮತ್ತು ಕವಿ ಬಿದಲೋಟಿ ರಂಗನಾಥ್ ಮಾತನಾಡಿ, ವಕೀಲರು ಪ್ರಸ್ತುತ ಸನ್ನಿವೇಶದಲ್ಲಿ ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗದ ವಾತವರಣ ನಿರ್ಮಾಣವಾಗಿದೆ. ನ್ಯಾಯ ಒದಗಿಸಬೇಕಾದ ನಮಗೆ ರಕ್ಷಣೆ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಪ್ರಕಾರ ಇಂತಹ ಕೃತ್ಯ ಗಳು ವಕೀಲರ ಮೇಲೆ ನಡೆದಾಗ ಸರ್ಕಾರ ಕಣ್ಮುಚ್ಚಿ ಕೂರದೇ ತಕ್ಷಣ ಹೀನ ಕೃತ್ಯ ಎಸಗಿದವರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ದುಷ್ಕರ್ಮಿಗಳು ಅಟ್ಟಹಾಸಕ್ಕೆ ಅಂತ್ಯ ಹಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರ ಜಾಗ್ರತೆ ವಹಿಸಬೇಕು. ಅಲ್ಲದೆ ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ ಈಗಿರುವ ಶಿಕ್ಷೆ ಪ್ರಮಾಣಕ್ಕೆ ತಿದ್ದು ಪಡಿ ತಂದು 7 ವರ್ಷಕ್ಕೆ ಹೆಚ್ಚಿಸುವ ಮೂಲಕ ವಕೀಲರಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.ವಕೀಲರ ಸಂಘದ ಉಪಾಧ್ಯಕ್ಷ ಅಶ್ವತ್ಥನಾರಾಯಣ್, ಪ್ರಧಾನ ಕ್ರಾಯದರ್ಶಿ ನರಸೇಗೌಡ, ಖಜಾಂಚಿ ಪುಟ್ಟಮ್ಮ, ವಕೀಲರಾದ ಅಶೋಕ್, ತಿಮ್ಮರಾಜು, ವೀರಕ್ಯಾತಯ್ಯ, ದೀಪಾ ಮಹೇಶ್, ರಾಧಿಕ, ನಂಜುಂಡಪ್ಪ, ಶಿವಕುಮಾರ್. ಹರೀಶ್, ಗಂಗಾಧರ್, ನರಸಿಂಹಮೂರ್ತಿ, ಶಿವದಾಸ್, ರಘುನಾಥ್ ರೆಡ್ಡಿ, ಪಿ.ನಾಗಿರೆಡ್ಡಿ, ಮುರುಳೀಧರ್, ಜಗನ್ನಾಥ್ ಇನ್ನೂ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.