ಹಿರೇಕೆರೂರು: ಬಣಜಿಗ ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು ಪಪಂ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ನೀಡುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶಾಸಕರ ಗೃಹ ಕಚೇರಿಯಲ್ಲಿ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕಲ್ಯಾಣಪ್ಪ ಹಂಚಿನ ಮಾತನಾಡಿ, ನಮ್ಮ ಸಮಾಜದ ಆಗು ಹೋಗುಗಳ ಬಗ್ಗೆ ಚರ್ಚಿಸಲು ಹಾಗೂ ಸಣ್ಣ ಸಭೆ ಸಮಾರಂಭಗಳಿಗೆ ನಮಗೆ ಸಮುದಾಯ ಭವನದ ಅವಶ್ಯಕತೆಯಿದ್ದು, ಪಟ್ಟಣದಲ್ಲಿ ಪಪಂ ಇಲಾಖೆಯ ವತಿಯಿಂದ ಸೂಕ್ತ ನಿವೇಶನ ನೀಡಬೇಕು ಹಾಗೂ ನಮ್ಮ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಬಹು ಹಿಂದುಳಿದಿದ್ದು, ನಮ್ಮ ಮಕ್ಕಳ ಶಿಕ್ಷಣದ ಭವಿಷ್ಯ ಮತ್ತು ನೌಕರಿ ಪಡೆಯಲು ೨ಎ ಮೀಸಲಾತಿ ಪ್ರಮಾಣ ಪತ್ರದ ಅವಶ್ಯವಿದ್ದು, ಈಗಾಗಲೇ ರಾಜ್ಯದ ಅನೇಕ ಜಿಲ್ಲೆ, ತಾಲೂಕುಗಳಲ್ಲಿ ಬಣಜಿಗ ಸಮಾಜದವರಿಗೆ ೨ಎ ಮೀಸಲಾತಿ ನೀಡುತ್ತಿದ್ದಾರೆ. ಈ ಕುರಿತು ತಹಸೀಲ್ದಾರರಿಗೆ ಮನವರಿಕೆ ಮಾಡಿ ನಮಗೆ ೨ಎ ಮೀಸಲಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಬೇಕು ಎಂದರು.ಮನವಿ ಸ್ವಿಕರಿಸಿ ಮಾತನಾಡಿದ ಶಾಸಕ ಯು.ಬಿ. ಬಣಕಾರ, ಸ್ಥಳದಲ್ಲಿದ್ದ ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಎನ್.ಟಿ., ಅವರಿಗೆ ಮನವಿ ಪತ್ರ ನೀಡಿ, ಕೂಡಲೇ ಈ ಬಗ್ಗೆ ಪಪಂ ಸದಸ್ಯರೊಂದಿಗೆ ಪರಿಶೀಲನೆ ನಡೆಸಿ, ನಿವೇಶನ ನೀಡಲು ಸೂಚಿಸಿದರು ಹಾಗೂ ಹಾವೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಮೇಲಧಿಕಾರಿಗಳ ಸಭೆ ನಡೆಯಲಿದ್ದು, ಮೀಸಲಾತಿ ಸಂಬಂಧಿಸಿದಂತೆ ಈ ವಿಷಯವಾಗಿ ಚರ್ಚೆ ನಡೆಸುತ್ತೇನೆ ಎಂಬ ಭರವಸೆ ನೀಡಿದರು.ನಂತರ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಮಾಜದ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರನ್ನು ಸನ್ಮಾನಿಸಲಾಯಿತು.ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಸಮಾಜದ ಕಾರ್ಯದರ್ಶಿ ಉಮೇಶ ಹಳಕಟ್ಟಿ, ಉಪಾಧ್ಯಕ್ಷ ಪರಮೇಶಪ್ಪ ಹಲವಾಗಿಲ, ಸಹ ಕಾರ್ಯದರ್ಶಿ ಈರಣ್ಣ ಹಾದ್ರಿಹಳ್ಳಿ, ಮದ್ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರುದ್ರೇಶ ಬೇತೂರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದುಧರ ಹಳಕಟ್ಟಿ, ಸಂತೋಷ ಹಂಚಿ, ರಾಜು ಚಿನ್ನಿಕಟ್ಟಿ, ಇಂದುಧರ ಶೆಟ್ಟರ, ಶಿವಲಿಂಗಣ್ಣ ಕಲ್ಯಾಣಿ, ವಿನಾಯಕ ವಾಲಿ, ಚಂದ್ರಣ್ಣ ಕಲ್ಯಾಣಿ, ದಯಾನಂದ ಕಲ್ಯಾಣಿ, ಪ್ರಕಾಶ ಮಾಲ್ವಿ, ಜಗದೀಶ ಕಲ್ಯಾಣಿ, ಮಂಜುನಾಥ ಕಂಪ್ಲಿ, ಶಂಭು ಹಂಜಿ ಹಾಗೂ ಸಮಾಜದವರು ಇದ್ದರು.