ದರ್ವೇಶ ಗ್ರೂಪ್ಸ್‌ ವಂಚನೆ ಪ್ರಕರಣ ಇಡಿ, ಸಿಬಿಐಗೆ ವಹಿಸಲು ಆಗ್ರಹ

KannadaprabhaNewsNetwork |  
Published : Oct 01, 2024, 01:21 AM IST
30ಕೆಪಿಆರ್‌ಸಿಆರ್‌ 01: ಅಂಬಾಜಿ ರಾವು ಮೈದರ್ಕರ್ | Kannada Prabha

ಸಾರಾಂಶ

ಪ್ರಕರಣದ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವ ಹೂಡಿಕೆದಾರರು ತಮಗೆ ನ್ಯಾಯ ಸಿಗುವುದಿಲ್ಲ ಎನ್ನುವ ಆತಂಕ ಹೊಂದಿದ್ದಾರೆ ಎಂದು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಅತೀ ಹೆಚ್ಚು ಬಡ್ಡಿ ಆಸೆಯನ್ನೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರುಪಾಯಿ ಬಂಡವಾಳ ಪಡೆದು ಅಸಲು-ಬಡ್ಡಿ ವಾಪಸ್ಸು ನೀಡದೇ ವಂಚನೆ ಮಾಡಿರುವ ದರ್ವೇಶ ಗ್ರೂಪ್ಸ್‌ ಪ್ರಕರಣದ ತನಿಖೆಯನ್ನು ಇಡಿ, ಸಿಬಿಐ ಇಲ್ಲವೇ ಐಟಿಗೆ ವಹಿಸಬೇಕು ಎಂದು ಮುಖಂಡ ಅಂಬಾಜಿ ರಾವು ಮೈದರ್ಕರ್ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಸುಮಾರು ದಿನಗಳು ಕಳೆದಿವೆ. ಕೇವಲ ಒಂದೆರಡು ದೂರು ಪಡೆದು ಐದು ಜನ ಆರೋಪಿಗಳನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ವಹಿಸಿಕೊಂಡಿರುವ ಸಿಒಡಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ತಲೆಮರಿಸಿಕೊಂಡು ತಿರುಗುತ್ತಿರುವ ಮುಖ್ಯ ಆರೋಪಿ ಹಾಗೂ ಇತರೆ ಪ್ರಮುಖ ಏಜೆಂಟ್‌ರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಪ್ರಕರಣದ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವ ಹೂಡಿಕೆದಾರರು ತಮಗೆ ನ್ಯಾಯ ಸಿಗುವುದಿಲ್ಲ ಎನ್ನುವ ಆತಂಕ ಹೊಂದಿದ್ದಾರೆ ಎಂದು ದೂರಿದ್ದಾರೆ.

ದರ್ವೇಶ ಗ್ಲೋಬಲ್‌ ಕಂಪನಿಗೆ ಮೂರು ಜನ ನಿರ್ದೇಶಕರಿದ್ದು, ಇಲ್ಲಿತನಕ ಒಬ್ಬರನ್ನು ಸಹ ಬಂಧಿಸಿಲ್ಲ, ದರ್ವೇಶ ಕಂಪನಿ ಜೊತೆಗೆ ದರ್ವೇಶ ಡಿಜಿಪಿಇಎಕ್ಸ್‌, ನೆಕ್ಸ್‌, ಈಗಲ್‌, ಡಿಡಿಪಿ, ದೌಲತ್‌ ಹೀಗೆ ಸುಮಾರು 10 ಕಂಪನಿಗಳು ಚಾಲ್ತಿಯಲಿದ್ದು, ಈ ಎಲ್ಲ ಕಂಪನಿಗಳ ಮಾಲೀಕರು ಹಾಗೂ ಏಜೆಂಟರು ಹಾಗೂ ಸಹ ಏಜೆಂಟರನ್ನು ಸಿಒಡಿ ಪರಿಗಣಿಸಿಯೇ ಇಲ್ಲವೆಂದು ಆರೋಪಿಸಿದರು.

ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲವು ಪ್ರಮುಖ ಆರೋಪಿ ಹಾಗೂ ಇತರರಿಗೆ ಬೇಲ್‌ ಅರ್ಜಿ ತಿರಸ್ಕರಿಸಿದ್ದು, ಈ ನಡುವೆ ಕೆಲವರು ನಕಲಿ ಬಾಂಡ್‌ ಸೃಷ್ಟಿಸಿ ಹಣ ವಾಪಸ್ಸು ನೀಡುವುದಾಗಿ ಹುಸಿ ಭರವಸೆ ನೀಡುತ್ತಿದ್ದಾರೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ಈಗಲಾದರು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಉನ್ನತ ಸಂಸ್ಥೆಗೆ ವಹಿಸಬೇಕು, ಬಡವರು, ಮಧ್ಯಮ ವರ್ಗದವರು ಆಸ್ತಿ ಅಡವಿಟ್ಟು, ಮಾರಾಟ ಮಾಡಿ, ಸಾಲ ಪಡೆದು ಕಂಪನಿಯಲ್ಲಿ ಹಣ ಹೂಡಿರುವವರಿಗೆ ವಾಪಸ್ಸು ಹಣ ನೀಡಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿವಾಸಿಗಳಾದ ಮಸೂದ್ ಅಲಿ, ಎಂಡಿ ಅಬ್ರಾರ್‌ ಹುಸೇನ್‌, ಆಸೀಫ್‌, ಸೈಯದ್‌ ಇಮಾಮ್‌, ಜಾಫರ್, ಹಾಜಿ ಇಬ್ರಾಹಿಂ, ನಜೀರ್‌, ಶೇಖ ಅಖಾನಿ ಸೇರಿ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ