ಶಿರಹಟ್ಟಿಯಲ್ಲಿ ಬಹಿರಂಗ ಹರಾಜು ನಡೆಸಲು ಆಗ್ರಹ

KannadaprabhaNewsNetwork | Published : Jul 4, 2024 1:05 AM

ಸಾರಾಂಶ

ಶಿರಹಟ್ಟಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಾಗಿದ್ದು, ನಿಯಮ ಏನೇ ಇರಲಿ ಜನರ ಒಳಿತಿನ ದೃಷ್ಟಿಯಿಂದ ಶಿರಹಟ್ಟಿಯಲ್ಲಿಯೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದರೆ ಒಳ್ಳೆಯದು

ಶಿರಹಟ್ಟಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಕ್ಷ್ಮೇಶ್ವರ ಇದರ ಒಡೆತನದಲ್ಲಿ ಖಾಲಿ ಇರುವ ಹೊಸ ಕಟ್ಟಡ (ಮಳಿಗೆಗಳನ್ನು) ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಟೆಂಡರ್ ಕಂ- ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಲು ನಿರ್ಧರಿಸಿದ್ದು,ಈ ಹರಾಜು ಪ್ರಕ್ರಿಯೆ ಶಿರಹಟ್ಟಿ ಪಟ್ಟಣದಲ್ಲಿಯೇ ಮಾಡಬೇಕು ಎಂದು ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಆಗ್ರಹಿಸಿದ್ದಾರೆ.

ಬುಧವಾರ ಪಕ್ಷಾತೀತವಾಗಿ ತಹಸೀಲ್ದಾರಗೆ ಮನವಿ ಸಲ್ಲಿಸಿ ಮಾತನಾಡಿದರು. ಶಿರಹಟ್ಟಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಾಗಿದ್ದು, ನಿಯಮ ಏನೇ ಇರಲಿ ಜನರ ಒಳಿತಿನ ದೃಷ್ಟಿಯಿಂದ ಶಿರಹಟ್ಟಿಯಲ್ಲಿಯೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದರೆ ಒಳ್ಳೆಯದು ಎಂದು ಹೇಳಿದರು.

ಈ ಟೆಂಡರ್ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ, ಮಹಿಳೆಯರಿಗೆ ಆದ್ಯತೆ ಕಲ್ಪಿಸಲಾಗಿದೆ. ಇವರೆಲ್ಲರೂ ಬ್ಯಾಂಕ್‌ನಿಂದ ಡಿಡಿ ಪಡೆದುಕೊಂಡು ಲಕ್ಷ್ಮೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು. ಮತ್ತೊಮ್ಮೆ ಅರ್ಜಿ ಫಾರ್ಮ ಪಡೆಯಲು ಹೋಗಬೇಕು. ಈ ಎಲ್ಲ ಪ್ರಕ್ರಿಯೆ ಶಿರಹಟ್ಟಿಯಲ್ಲಿಯೇ ನಡೆದರೆ ಮಹಿಳೆಯರಿಗೆ, ಅಂಗವಿಕಲರಿಗೆ ಅನೂಕೂಲವಾಗಲಿದ್ದು, ತಕ್ಷಣ ಹರಾಜು ಪ್ರಕ್ರಿಯೆಯನ್ನಾದರೂ ಶಿರಹಟ್ಟಿಯಲ್ಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಹಳೆ ಅಂಗಡಿಗಳು ಸಂಪೂರ್ಣ ಸೋರುತ್ತಿವೆ.ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಮೊದಲೇ ವ್ಯವಸ್ಥೆ ಬಗ್ಗೆ ಗಮನಕ್ಕೆ ತರಬೇಕು.ಮಳೆ ಬಂದರೆ ಸಾಕು ಅಂಗಡಿಯೊಳಗೆ ನಿಲ್ಲಲು ಕೂಡ ಜಾಗ ಸಿಗುವುದಿಲ್ಲ. ಈ ಎಲ್ಲ ಅವ್ಯವಸ್ಥೆ ಗೊತ್ತಿದ್ದು ಅಧಿಕಾರಿಗಳು ಮತ್ತೆ ಹರಾಜಿಗೆ ಮುಂದಾಗಿರುವುದು ಸಾರ್ವಜನಿಕರಿಗೆ ಮತ್ತು ಮಳಿಗೆ ತೆಗೆದುಕೊಳ್ಳುವವರಿಗೆ ಮೋಸ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಸುಮಾರು ೯೦ಕ್ಕೂ ಹೆಚ್ಚು ಜನ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ಮಳಿಗೆ ಪಡೆಯಲು ಡಿಡಿ ಕೂಡ ತೆಗೆಸಿ ಈಗಾಗಲೇ ನಿಯಮಾನುಸಾರ ಮತ್ತು ಕೊನೆ ದಿನಾಂಕದೊಳಗೆ ಸಲ್ಲಿಸಿದ್ದಾರೆ.ಇಷ್ಟೊಂದು ಜನ ಹಾಗೂ ಅಂಗವಿಕಲರು, ಮಹಿಳೆಯರು ಮತ್ತು ಉಳಿದವರೆಲ್ಲ ಲಕ್ಷ್ಮೇಶ್ವರಕ್ಕೆ ಹೋಗಿ ಬರುವುದೆಂದರೆ ತೊಂದರೆಯಾಗುವ ಕಾರಣ ಶಿರಹಟ್ಟಿಯಲ್ಲಿಯೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದರು.

ಶಿರಹಟ್ಟಿ ಪಟ್ಟಣದಲ್ಲಿಯೇ ಒಟ್ಟು ೧೯ ಮಳಿಗೆಗಳು ಇದ್ದು, ದೊಡ್ಡ ಪ್ರಮಾಣದ ಆದಾಯ ಕೂಡ ಸಂಗ್ರಹವಾಗುತ್ತಿದೆ. ಈ ಮಾನದಂಡವನ್ನಾದರೂ ಪರಿಗಣಿಸಿ ಶಿರಹಟ್ಟಿಯಲ್ಲಿ ಪ್ರತ್ಯೇಕವಾಗಿ ಎಪಿಎಂಸಿ ಮಾರುಕಟ್ಟೆ ಆರಂಭಕ್ಕೆ ಶಾಸಕರು ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ತಹಸೀಲ್ದಾರ ಅನಿಲ ಕೆ. ಬಡಿಗೇರ ಮನವಿ ಸ್ವೀಕರಿಸಿದರು. ಈ ವೇಳೆ ತಾಲೂಕು ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ಅಕ್ಬರ್‌ಸಾಬ ಯಾದಗೀರಿ, ಫಕ್ಕೀರೇಶ ರಟ್ಟಿಹಳ್ಳಿ, ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ವಡವಿ, ರಾಮಣ್ಣ ಕಂಬಳಿ, ಅಲ್ಲಾಭಕ್ಷಿ ನಗಾರಿ, ರಾಮಚಂದ್ರ ಗಡದ, ಎಸ್.ವಿ. ಲಕ್ಕುಂಡಿಮಠ, ಸಿದ್ದಪ್ಪ ವಡ್ಡರ ಸೇರಿದಂತೆ ಅನೇಕರು ಇದ್ದರು.

Share this article