ಕನ್ನಡಪ್ರಭ ವಾರ್ತೆ ಸಿಂಧನೂರುನಗರಾಭಿವೃದ್ಧಿ ಹೋರಾಟ ಸಮಿತಿ ತಾಲ್ಲೂಕು ಘಟಕ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿತು.ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಮನವಿ ಪತ್ರ ಸ್ವೀಕರಿಸಿ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಆಲಿಸಿದ ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಅವರು ಆಸ್ಪತ್ರೆಯ ಬಗ್ಗೆ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಭೇಟಿ ಕೊಡಲಾಗಿದೆ. ಈ ಸಂದರ್ಭದಲ್ಲಿ ಹಲವು ನ್ಯೂನತೆಗಳು ಕಂಡು ಬಂದಿವೆ. ಎರಡು ವಾರ್ಡ್‌ಗಳ ರಿಪೇರಿ ಕೆಲಸ ನಡೆ ಯುತ್ತಿದೆ. ಆನಂತರ ಜನರಲ್ ಸರ್ಜರಿ ವಾರ್ಡ್, ಪೇಸ್ಟ್ ಆಪರೇಟಿವ್ ವಾರ್ಡ್ ವ್ಯವಸ್ಥೆ ಮಾಡಲಾಗುವುದು. ಶೇ.70 ರಷ್ಟು ಹೆರಿಗೆ ವಿಭಾಗದ ಒತ್ತಡ ಇರುವುದರಿಂದ ಸಮಸ್ಯೆ ಯಾಗಿದೆ. ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆಯನ್ನು ಗುತ್ತಿಗೆದಾರರು ಇನ್ನು 2 ತಿಂಗಳಲ್ಲಿ ಪೂರ್ಣಗೊಳಿಸಿ ಕೊಡುವುದಾಗಿ ಹೇಳಿದ್ದಾರೆ. ಹೆರಿಗೆ ವಿಭಾಗ ಅಲ್ಲಿಗೆ ಸ್ಥಳಾಂತರಗೊಂಡರೆ ಒತ್ತಡ ಕಡಿಮೆಯಾಗಲಿದೆ. ನಿಗದಿತ ವೇಳೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇರೆ ಕಡೆ ಇರುತ್ತಾರೆಂಬ ದೂರು ಸಾರ್ವಜನಿಕರು, ಸಂಘಟನೆಗಳಿಂದ ಬಂದಿದ್ದು, ಈಗಾಗಲೇ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿ ವೈದ್ಯರಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಲಾಗಿದೆ. ಶಾಸಕರು ಬಂದಾಕ್ಷಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿ ಸಭೆ ನಡೆಸಿ, ಸಮಸ್ಯೆಗಳ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದರು.ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಸಮಿತಿ ಸಭೆ ಕರೆಯುವ ಜೊತೆಗೆ ಆದಷ್ಟು ಶೀಘ್ರ ಶಾಸಕರು, ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನೊಳಗೊಂಡ ಸಭೆ ಕರೆಯಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಆಸ್ಪತ್ರೆಯ ಮುಂದೆ ಅನಿರ್ದಿಷ್ಟ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸಮಿತಿಯ ಸಂಚಾಲಕರಾದ ಚಂದ್ರಶೇಖರ ಗೊರಬಾಳ,ಡಿ.ಎಚ್.ಕಂಬಳಿ, ವೀರಭದ್ರಗೌಡ ಅಮರಾಪುರ, ವೆಂಕನಗೌಡ ಗದ್ರಟಗಿ, ಕರೇಗೌಡ ಕುರುಕುಂದಾ, ಟಿ.ಹುಸೇನಸಾಬ್, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ಶಂಕರ ಗುರಿಕಾರ, ಅಮೀನಸಾಬ್ ನದಾಫ್, ವೆಂಕಟೇಶ ಗಿರಿಜಾಲಿ, ಡಾ.ವಸೀಮ್ ಅಹ್ಮದ್, ದುರುಗೇಶ, ಕೃಷ್ಣಮೂರ್ತಿ ಇದ್ದರು.