ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಹೈದ್ರಾಬಾದ್ ಪ್ರಾಂತದ ಭಾಗವಾಗಿದ್ದ ವಿಜಯಪುರ ಜಿಲ್ಲೆಯನ್ನು 371ಜೆ ಮೀಸಲಾತಿಯಿಂದ ಕೈ ಬಿಡುವ ಮೂಲಕ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದು ಖಂಡನೀಯ. ಕೂಡಲೇ ಬಿಟ್ಟು ಹೋದ ಪ್ರದೇಶಕ್ಕೆ ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿದ ಅವರು, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಡಿ ಜಿಲ್ಲೆಯ ಸಾರಿಗೆ ವ್ಯವಸ್ಥೆ ಇದೆ. ನ್ಯಾಯಾಂಗ ವ್ಯವಸ್ಥೆ ಕೂಡ ಕಲಬುರಗಿ ಉಚ್ಚ ನ್ಯಾಯಾಲಯದಡಿ ಬರುತ್ತದೆ. ಹೀಗಿದ್ದರೂ ಸಹ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದಡಿ ಏಕೆ ಸೇರಿಸಿಲ್ಲ ಎಂದು ಸರ್ಕಾರ ಮತ್ತು ಜಿಲ್ಲೆಯ ಸಚಿವರು, ಸಂಸದರು ಮತ್ತು ಶಾಸಕರು ಉತ್ತರಿಸಬೇಕೆಂದು ಒತ್ತಾಯಿಸಿದರು.
ನಂಜುಂಡಪ್ಪ ವರದಿ ಪ್ರಕಾರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವಿಜಯಪುರ ಜಿಲ್ಲೆಗೆ 371 ಜೆ ಪ್ರಾದೇಶಿಕ ಮೀಸಲಾತಿ ಅಡಿ ಸೇರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ಶಿಫಾರಸು ಕಳಿಸಿ ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಿಕೊಡಲು ಜನಪ್ರತಿನಿಧಿಗಳು ಮುಂದಾಗಬೇಕೆಂದು ಆಗ್ರಹಿಸಿದರು.ಹೋರಾಟಗಾರ ಪ್ರಕಾಶ ಸುಂಕದ ಮಾತನಾಡಿ, 371ಜೆ ಮೀಸಲಾತಿ ವಿಷಯದಲ್ಲಿ ವಿಜಯಪುರ ಜಿಲ್ಲೆಗೆ ಸರ್ಕಾರಿ ನೌಕರಿ ಮತ್ತು ಶಿಕ್ಷಣದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕೂಡಲೇ ಜಿಲ್ಲೆಯ ಸಚಿವರು, ಎಲ್ಲ ಶಾಸಕರು ಜಿಲ್ಲೆಗೆ ಮೀಸಲಾತಿ ಸಿಗುವಂತೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡರಾದ ನಾಗೇಶ ಗಬ್ಬೂರ ಶಿವಾನಂದ ನಾಗೂರ ಇದ್ದರು.