-ಮಳೆ, ಪ್ರವಾಹ ಪೀಡಿತರತ್ತ ತೆರಳಿ ಸಾಂತ್ವನ ಹೇಳೋ ಆಸಕ್ತಿ ಸಚಿವರು, ಶಾಸಕರಲ್ಲಿಲ್ಲ । ಜಿಲ್ಲಾದ್ಯಂತ ಜನಾಕ್ರೋಶ
-----ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಅತಿವೃಷ್ಟಿ ಹಾಗೂ ನೆರೆ ಹಾವಳಿಯಂದ ಕಂಗಾಲಾಗಿರುವ ಜಿಲ್ಲೆಯ ಜನತೆ, ರೈತರ ಗೋಳು ಆಲಿಸಲು ಜನರ ಮತ ಪಡದು ಆಯ್ಕೆಯಾಗಿ ಹೋಗಿರುವ ಸಚಿವರು, ಶಾಸಕರು ಯಾರೂ ತಮ್ಮತ್ತ ಸುಳಿಯದೆ ಇರೋದಕ್ಕೆ ಜಿಲ್ಲಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ.
ಜನನಾಯಕರು ಕೇವಲ ವೀಡಿಯೋ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಖುದ್ದು ಭೇಟಿ ನೀಡಿ ಸಾಂತ್ವನ ಹೇಳುವವರಿಲ್ಲ ಎಂದು ರೈತ ಪರ ಸಂಘಟನೆಗಳವರು ದೂರುತ್ತಿದ್ದರೆ, ಜನರಂತೂ ಮತ ಕೇಳಲು ಬರುವವರು ಮಳೆ, ನೆರೆ ನೀರಲ್ಲಿ ನಾವು ಮುಳುಗಿ ಹೋದರೂ ಮೇಲೆತ್ತಲೂ ಬರುತ್ತಿಲ್ಲ, ಇದ್ದೇವೋ, ಸತ್ತೇವೋ ಎಂದು ನೋಡಲೂ ಪುರಸೊತ್ತಿಲ್ಲ ಎಂದು ಜಿಲ್ಲೆಯ ಜನನಾಯಕರನ್ನು ದೂಷಿಸುತ್ತಿದ್ದಾರೆ.ಮಳೆ ಹಾಗೂ ನೆರೆ ಪೀಡಿತ ಅಫಜಲಪುರ ತಾಲೂಕಿನಲ್ಲಿ ಅನೇಕ ರೈತರು ಎಕರೆಗೆ ಹತ್ತು ಸಾವಿರದಂತೆ ತೊಗರಿ ಬಿತ್ತಲು ವೆಚ್ಚ ಮಾಡಿ ಆಗಿರುವ ತೊಂದರೆ ವಿವರಿಸುತ್ತ ಕಣ್ಣೀರು ಹಾಕಿದರು.
ನಮ್ಮ ಗೋಳು ಕೇಳಲು ಶಾಸಕರು, ಸಚಿವರು, ಅಧಿಕಾರಿಗಳೂ ಬಂದಿಲ್ಲ. ಕುಳ್ಳಬಾನ ಸುತ್ತಲೇ ಕುಳ್ಳ ಆಯ್ತಾರಂತೆ ಅನ್ನೋರೀತಿ ಕಲಬುರಗಿ ಸುತ್ತ 30 ಕಿ.ಮೀ ಒಳ, ಹೊರಗೆ ಬಂದು ಹೋಗುತ್ತಾರೆ ಹೊರತು ನಮ್ಮತ್ತ ಗಮನಿಸುತ್ತಿಲ್ಲ ಎಂದು ದೂರಿದರು.ಇವರು ವಿಮೆ ಮಾಡಿಸಿದರೂ ಹೆಲ್ಪ್ ಲೈನ್ ಸಂಪರ್ಕ ಸಿಗುತ್ತಿಲ್ಲವೆಂದು, ನೂರಾರು ಎಕರೆ ಹಾನಿ ತಮ್ಮೂರಲ್ಲಾದರೂ ಇನ್ನೂ ಕೃಷಿ, ಕಂದಾಯ ಅಧಿಕಾರಿಗಳು ಯಾರೂ ಬಂದು ಹಾನಿ ಲೆಕ್ಕ ಹಾಕಿಲ್ಲವೆಂದರು. ಜಂಟಿ ಸಮೀಕ್ಷೆ ಆರಂಭಿಸುವುದಾಗಿ ಹೇಳುತ್ತಾರೆ ಹೊರತುಇತ್ತ ತಿರುಗಿ ಕೂಡ ನೋಡುವುದಿಲ್ಲ
ಎಂದು ರೈತರಾದ ಮಹಾದೇವಪ್ಪ, ಕಲ್ಲಪ್ಪ, ಸಂತೋಷ ಗೋಳು ತೋಡಿಕೊಂಡಿದ್ದಾರೆ.ಸೇಡಂ, ಚಿತ್ತಾಪುರ, ಕಾಳಗಿ, ಚಿಂಚೋಳಿ ಇಲ್ಲೆಲ್ಲಾ ಮುಲ್ಲಾಮಾರಿ, ಬೆಣ್ಣೆತೋರಾ, ಕಾಗಿಣಾ, ಕಮಲಾವತಿಗೆ ನೆರೆ ಬಂದು ಫಸಲು ಕೊಚ್ಚಿ ಹೋಗಿದೆ. ಅಫಜಲ್ಪೂರ, ಆಳಂದ, ಕಲಬರಗಿ, ಜೇವರ್ಗಿ, ಶಹಾಬಾದ್ ಇಲ್ಲೆಲ್ಲಾ ಮಳೆಯ ಹೊಡೆತ, ಭೀಮೆ, ಅಮರ್ಜಾಗೆ ನೆರೆ ಬಂದು ಹಾನಿ ಡಬ್ಬಲ್ ಆಗಿದೆ.
ಜಿಲ್ಲಾದ್ಯಂತ ನದಿ, ಹಳ್ಳಕೊಳ್ಳ ಉಕ್ಕೇರಿ ಆಗಿರುವ ಹಾನಿ ಲೆಕ್ಕವೇ ಇಲ್ಲದಂತಾಗಿದೆ. ಹೀಗೆ ಮಳೆ, ನೆರೆ ನೀರಲ್ಲೇ ಬದುಕು ಮೂರಾಬಟ್ಟೆಯಾಗಿ ಕಣ್ಣೀರು ಹಾಕುತ್ತಿರುವ ಜನರ ಬಳಿ ಹೋಗಿ ಇಂದಿಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಾಂತ್ವನ ಹೇಳುವ ಸೌಜನ್ಯ ತೋರಿಲ್ಲ ಎಂದು ಜನರೇ ದೂರುತ್ತಿದ್ದಾರೆ.--
...ಬಾಕ್ಸ್....ಭಾರಿ ಸಂಕಷ್ಟದಲ್ಲಿ ಜಿಲ್ಲೆಯ ಜನತೆ
ಕಲಬುರಗಿ ಜಿಲ್ಲೆಗೆ ಈ ಬಾರಿ ಅತಿವೃಷ್ಟಿ ಹಾಗೂ ಪ್ರವಾಹ ಎರಡೂ ಒಂದರ ಮೇಲೊಂದರಂತೆ ಅಪ್ಪಳಿಸಿವೆ.ನಿರಂತರ ಮಳೆಗೆ ಬಿತ್ತಿರುವ 6.10ಲಕ್ಷ ಹೆಕ್ಚರ್ ತೊಗರಿಯಲ್ಲಿ ಶೇ. 60ರಷ್ಟು ಹಾಳಾಗಿದೆ. ಕಾಳು ಕಟ್ಟಿದ್ದ ಹೆಸರು, ಉದ್ದು ಮಳೆಯಲ್ಲಿ ಮುಳುಗಿ ಹಾಳಾಗಿವೆ. ಸೂರ್ಯಕಾಂತಿ, ಹತ್ತಿ ಫಸಲಲ್ಲೂ ಮಳೆ ನೀರು ನಿಂತು ಒಣಗಲಾರಂಭಿಸಿವೆ. ಜಿಲ್ಲೆಯ ಸಾವಿರಾರು ರೈತ ಕುಟುಂಬ ತಾವು ನಂಬಿದ್ದ ತೊಗರಿ ಸೇರಿದಂತೆ ಹಣದ ಬೆಳೆ ಹಾಳಾಗಿರೋದಕ್ಕೆ ಹಲಬುತ್ತಿದ್ದಾರೆ. ಮಳೆ ನೀರು ಹೊಲದಲ್ಲಿದ್ದಾಗಲೇ ಸಮೀಕ್ಷೆ ನಡೆಸಿ ಎಂದು ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದಿದ್ದಾರೆ. ನೆರವಿಗೆ ಬರುವರೆ? ಜನನಾಯಕರು ಎಂದು ಸರ್ಕಾರದತ್ತ ನೋಡುತ್ತಿದ್ದಾರೆ.
ಕಳೆದ 5ವರ್ಷಗಳ ನಂತರ ಮಹಾರಾಷ್ಟ್ರದ ಉಜನಿ, ವೀರ ಭಟ್ಕರ್ ಜಲಾಶಯದಿಂದ 1.50ಲಕ್ಷ ಕ್ಯುಸೆಕ್ ಹೆಚ್ಚಿನ ನೀರು ಭೀಮೆಗೆ ಹರಿದು ಬಂದು ಉಂಟಾದ ಪ್ರವಾಹದಲ್ಲಿ ನದಿಗುಂಟ ಇರುವ ಜೇವರ್ಗಿ, ಅಫಜಲಪುರ, ಕಲಬುರಗಿ-ಶಹಾಬಾದ್ ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಫಸಲಿರೋ ಹೊಲಗದ್ದೆಗೆ ನೀರು ನುಗ್ಗಿ ಭಾರಿ ಹಾನಿಯಾಗಿದೆ.ನದಿ ಉಕ್ಕೇರಿ ಕೆಸರು, ನೀರಲ್ಲಿ ಮುಳುಗಿದ್ದೇವೆ, ರಕ್ಷಣೆಗೆ ಬರುವಂತೆ ಭೀಮಾ ತೀರದ ನೂರಕ್ಕೂ ಹೆಚ್ಚು ಹಳ್ಳಿಗಳ ಜನ ಜಿಲ್ಲಾಡಳಿತಕ್ಕೆ ಆಗ್ರಹಿಸಿದರೆ, ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಬೆಳೆ ಹಾನಿ ಲೆಕ್ಕಹಾಕಿ ಪರಿಹಾರ ಕೊಡಿರೆಂದು ರೈತರು ಗೋಳಾಡುತ್ತಿದ್ದಾರೆ. ಮಳೆ ಹೊಡೆತದಿಂದ ಕಂಗಾಲಾಗಿರುವ ಜನತೆಗೆ ಪ್ರವಾಹದ ಹೊಡೆತವೂ ಮರ್ಮಾಘಾತ ನೀಡಿದೆ.
.....ಬಾಕ್ಸ್.....ಬೆಳೆ ವಿಮೆ ಹಣ ಕಟ್ಟಿದ ರೈತರ ಸಂಕಷ್ಟ!
ಜಿಲ್ಲೆಯಲ್ಲಿ 3 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಇವರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆಗೆ ವಿಮೆ ಮಾಡಿಸಿದ ರೈತರ ಗೋಳಿಗೆ ಇನ್ಸೂರೆನ್ಸ್ ಕಂಪನಿಯೂ ಕಿವುಡಾಗಿದೆ. ವಿಮೆ ಕಟ್ಟಿದ್ದ ರೈತರು ಟೋಲ್ ಫ್ರೀ ನಂಬರಿಗೆ ಫೊನ ಮಾಡಿ ದೂರು ಸಲ್ಲಿಸಲು ಮುಂದಾದರೂ ಯಾರೂ ಕರೆ ಸ್ವೀಕರಿಸುತ್ತಿಲ್ಲವೆಂದು ಗೋಳಾಡುತ್ತಿದ್ದಾರೆ.ಜಂಟಿ ಸಮೀಕ್ಷೆಗೆ ಕೂಗು: ಮುಂಗಾರು ಹಂಗಾಮಿನಲ್ಲಿ 8.90 ಲಕ್ಷ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 8.67ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮಳೆಯಿಂದ ಬೆಳೆಗೆ ಭಾರಿ ನಷ್ಟ ಸಂಭವವಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಒಳಗೊಂಡಂತೆ ಬೆಳೆಹಾನಿ ಜಂಟಿ ಸಮೀಕ್ಷೆ ಪ್ಯಾರದರ್ಶಕವಾಗಿ ನಡೆದಾಗ ಮಾತ್ರ ನಿಖರ ಹಾನಿ ಮಾಹಿತಿ ಹೊರಬರಲಿದೆ.
ಫೋಟೋ- ಕಬ್ಬು ನೀರಲ್ಲಿಭೀಮಾ ತೀರದಲ್ಲಿರುವ ನೂರಾರು ಎಕರೆ ಕಬ್ಬಿನ ಗದ್ದೆ ಕಳೆದೊಂದು ವಾರದಿಂದ ನೆರೆ ನೀರಲ್ಲಿ ಮುಳುಗಿರುವ ನೋಟ
ಫೋಟೋ- ಸೂರ್ಯಕಾಂತಿ ನೀರಲ್ಲಿಮಳೆ ಹಾಗೂ ನೆರೆ ನೀರಲ್ಲಿ ಸೂರ್ಯಕಂತಿ ಫಸಲು ಹಾಳಾಗಿರುವ ನೋಟ
ಫೋಟೋ- ರೈತ ನೀರಲ್ಲಿಅಫಜಲಪುರ ಕಬ್ಬು ರೈತರು ನೆರೆ ನೀರಿನಿಂದ ಬದುಕೇ ಹಾಳಾಗಿದೆ, ಕೇಳೋರಿಲ್ಲ ಗೋಳು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಫೋಟೋ- ನೀರಲ್ಲಿ ಫಸಲುಕಬ್ಬು, ಮೆಕ್ಕೆಜೋಳ, ತೊಗರಿ, ಹೆಸರು ನೀರಲ್ಲಿ ಹಾಳು
ಫೋಟೋ- ಮಂತ್ರಿಗಳು, ಶಾಸಕರು- ಕಲಬುರಗಿ ಜಿಲ್ಲೆ