ಗದಗ: ಗದಗ ರೈಲ್ವೆ ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ಅವರ ನಾಮಕರಣ ಮಾಡುವಂತೆ ಆಗ್ರಹಿಸಿ ರಾಜ್ಯ ಪಂ.ಪುಟ್ಟರಾಜ ರೈತ ಸಂಘದ ವತಿಯಿಂದ ಸಾಂಕೇತಿಕ ಒಂದು ದಿನದ ಉಪವಾಸ ಸತ್ಯಾಗ್ರಹ ನಗರದ ರೈಲ್ವೆ ನಿಲ್ದಾಣದ ಎದುರಿಗೆ ನಡೆಯಿತು.
ಸೊರಟೂರ-ಗದುಗಿನ ಫಕ್ಕೀರೇಶ್ವರ ಶಿವಚಾರ್ಯ ಸ್ವಾಮಿಗಳು ಮಾತನಾಡಿ, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಅಂಧರ ಅಂಬಿಗ, ಗಾನಯೋಗಿ ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಸಾಧನೆ ಅಪ್ರತಿಮವಾದದ್ದು. ಪೂಜ್ಯರು ಮನುಷ್ಯ ರೂಪದಲ್ಲಿ ದೇವ ಮಾನವರು ಮುಂದಿನ ಮನುಕುಲ ಇಂತಹ ಮಹಾನ ಸಾಧಕರ ನೆನಪಿನೊಂದಿಗೆ ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಅಸಂಖ್ಯಾತ ಭಕ್ತರ ಬೇಡಿಕೆಯಾಗಿರುವ ಗದುಗಿನ ರೈಲ್ವೆ ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಡಾ. ಪಂ.ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಪಿ. ಮುಳಗುಂದ ಮಾತನಾಡಿ, ಪೂಜ್ಯರ ಹೆಸರನ್ನು ಗದುಗಿನ ರೈಲ್ವೆ ನಿಲ್ದಾಣ ಇಡಬೇಕೆಂದು ಈಗಾಗಲೇ ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ವಿ.ಸೋಮಣ್ಣ ಅವರಿಗೆ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರ ಮೂಲಕ ಮನವಿಯನ್ನು ನೀಡಲಾಗಿದೆ. ಶಾಂತಿಯುತವಾಗಿ ಇಂದು ಹೋರಾಟವನ್ನು ಹಮ್ಮಿಕೊಂಡಿದ್ದು ಸರ್ಕಾರ ಮುತುವರ್ಜಿ ವಹಿಸಿ ಬೇಡಿಕೆಯನ್ನು ಈಡೇರಿಸಬೇಕು. ಮುಂದಿನ ದಿನಮಾನದಲ್ಲಿ ಈ ನ್ಯಾಯ ಸಮ್ಮತವಾದ ಬೇಡಿಕೆ ಈಡೇರದಿದ್ದರೆ ಉಗ್ರ ರೂಪವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಹೋರಾಟಕ್ಕೆ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರು ಜನಪದ ನುಡಿಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಶ್ಪಾಕಅಲಿ ಹೊಸಳ್ಳಿ, ಅಶೋಕ ಬಸೆಟ್ಟಿ, ಮಂಜುನಾಥ ಗುಡದೂರ, ಜೈರಾಬಿ ನದಾಫ, ಕವಿತಾ ಗುಡದೂರ, ಮನೋಹರ ಕರ್ಣಿ, ಶಂಭು ಅಂಗಡಿ, ಯಲ್ಲಪ್ಪ ವಾಲ್ಮೀಕಿ, ರಘುನಾಥರೆಡ್ಡಿ ಹುಚ್ಚಣ್ಣವರ, ಫಕ್ಕೀರಯ್ಯ ಕಣವಿಮಠ, ಗಾಯಿತ್ರಿ ಖಟವಟೆ, ಕಾಶಮ್ಮ ಭಜಂತ್ರಿ, ಗೋಣೆಪ್ಪ ಅಸೂಟಿ, ಮಲ್ಲೇಶ ಹೂಗಾರ ಸೇರಿದಂತೆ ಮುಂತಾದವರು ಇದ್ದರು.