ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೆಂಬಲ ಬೆಲೆಯಲ್ಲಿ ಮೆಕ್ಕೇಜೋಳ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ಜಿಲ್ಲೆಯಾದ್ಯಂತ ಕಳೆದ ಹದಿನೈದು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಮೆಕ್ಕೇಜೋಳ ಕಟಾವಿಗೆ ತೀವ್ರ ಹಿನ್ನಡೆಯಾಗಿದೆ. ಮಳೆ ಒಂದಿಷ್ಟು ಬಿಡುವು ನೀಡುತ್ತಿದ್ದಂತೆ ಕಟಾವು ಆರಂಭವಾಗಲಿದ್ದು ಮುಂಜಾಗ್ರತೆ ಕ್ರಮವಾಗಿ ಬೆಂಬಲ ಬೆಲೆಯಲ್ಲಿ ಮೆಕ್ಕೇಜೋಳ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಒತ್ತಾಯಿಸಿದರು.
ಮೆಕ್ಕೇಜೋಳದ ದರ ದಿಡೀರ್ ಕುಸಿತ ಕಂಡಿದೆ. ಕೊಪ್ಪಳದಲ್ಲಿ ಮಾರುಕಟ್ಟೆಗೆ ವಿಪರೀತ ಮೆಕ್ಕೇಜೋಳದ ಆವಕವಾಗುತ್ತಿದ್ದಂತೆ ಖರೀದಿದಾರರು ಕಡಿಮೆ ದರ ನಮೂದಿಸುತ್ತಿದ್ದಾರೆ. ಕ್ವಿಂಟಾಲ್ ಗೆ 1600 ರಿಂದ 1800 ರಷ್ಟು ಕಡಿಮೆ ಕಿಮ್ಮತ್ತಿಗೆ ಖರೀದಿ ಮಾಡಲು ಮುಂದಾಗಿದ್ದು ಅಲ್ಲಿನ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗದಲ್ಲಿಯೂ ಅಂತಹ ಪರಿಸ್ಥಿತಿ ನಿರ್ಮಾಣವಾಗುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ಖರೀದಿ ಕೇಂದ್ರ ತೆರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಗೊಬ್ಬರ, ಬಿತ್ತನೆ ಬೀಜ ಹಾಗೂ ಕೃಷಿ ಕಾರ್ಮಿಕರ ಕೂಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಕೃಷಿ ಉತ್ಪನ್ನದ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಹಾಕಿದ ಬಂಡವಾಳವೂ ವಾಪಸ್ಸು ಬರದೆ ರೈತ ನಷ್ಟ ಅನುಭವಿಸುತ್ತಿದ್ದಾನೆ. ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯ ಈರುಳ್ಳಿ ಬೆಳೆಗಾರ ಈ ಬಾರಿ ನಷ್ಟಕ್ಕೆ ಒಳಗಾಗಿ ಕೈ, ಮೈ ಸುಟ್ಟುಕೊಂಡಿದ್ದಾನೆ. ಬೇಸಾಯವೇ ಬೇಡವೆಂಬಷ್ಟರ ಮಟ್ಟಿಗೆ ಹತಾಶೆಗೆ ಒಳಗಾಗಿದ್ದಾನೆ. ಮೆಕ್ಕೇಜೋಳದಲ್ಲಿಯೂ ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೇಜೋಳಕ್ಕೆ ಕ್ವಿಂಟಾಲ್ ಗೆ 2390 ರುಪಾಯಿ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಈ ಮೊತ್ತಕ್ಕೆ ಕನಿಷ್ಟ 210 ರು. ಪ್ರೋತ್ಸಾಹ ಧನ ನೀಡಿ ಕ್ವಿಂಟಾಲ್ ಗೆ 2600 ರು. ನಂತೆ ಖರೀದಿ ಮಾಡಬೇಕು. ಕಬ್ಬಿಗೆ ಪ್ರೋತ್ಸಾಹ ಧನ ನೀಡುವಲ್ಲಿ ಉದಾರತೆ ತೋರುವ ರಾಜ್ಯ ಸರ್ಕಾರ ಬಯಲು ಸೀಮೆಯ ಮೆಕ್ಕೇಜೋಳ ರೈತರನ್ನೂ ಪರಿಗಣಿಸಬೇಕೆಂದು ಒತ್ತಾಯಿಸಿದರು.ಈ ಬಾರಿ ಜಿಲ್ಲೆಯ ಅರ್ಧಕ್ಕಿಂತ ಹೆಚ್ಚು ಭೂ ಪ್ರದೇಶದಲ್ಲಿ ಮೆಕ್ಕೇಜೋಳ ಬಿತ್ತನೆಯಾಗಿದ್ದು, ಬೆಂಕಿ ರೋಗ, ಸೈನಿಕ ಹುಳು ಬಾಧೆ ನಡುವೆಯೂ ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ. ಹಾಗಾಗಿ ಖರೀದಿ ಕೇಂದ್ರಗಳಲ್ಲಿ ಮೆಕ್ಕೇಜೋಳ ಖರೀದಿ ಮಾಡಿದ ರೈತರಿಗೆ ತಕ್ಷಣವೇ ಹಣ ಪಾವತಿಸಲು ಆವರ್ತ ನಿಧಿಯ ಹೆಚ್ಚಳ ಮಾಡಿ ಕನಿಷ್ಠ ಒಂದು ಸಾವಿರ ಕೋಟಿ ರುಪಾಯಿ ಕಾಯ್ದಿರಿಸಬೇಕು. ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆ ಮಾಡಲು ಹೋಬಳಿಗೊಂದು ಖರೀದಿ ಕೇಂದ್ರ ತೆರೆಯಬೇಕೆಂದು ಜಿಲ್ಲಾಡಳಿತಕ್ಕೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ರಾಜ್ಯ ಮುಖಂಡ ಕೆ.ಪಿ.ಭೂತಯ್ಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್, ರವಿಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.