ಪ್ರತಿ ಟನ್ ಕಬ್ಬಿಗೆ ₹5,500 ನೀಡಲು ಆಗ್ರಹ

KannadaprabhaNewsNetwork |  
Published : Nov 04, 2026, 12:30 AM IST
ಚಿತ್ರ 3ಬಿಡಿಆರ್56 | Kannada Prabha

ಸಾರಾಂಶ

ರೈತರ ಪ್ರತಿ ಟನ್ ಕಬ್ಬಿಗೆ 5,500 ರು. ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀದರ್

ರೈತರ ಪ್ರತಿ ಟನ್ ಕಬ್ಬಿಗೆ 5,500 ರು. ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೀದರ್ ಜಿಲ್ಲಾ ರೈತ ಸಂಘ ಸಮನ್ವಯ ಸಮಿತಿಯಿಂದ ಮಂಗಳವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ಹಾಗೂ ಧರಣಿ ಮಾಡುವ ಮೂಲಕ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಕಳೆದ ಎರಡು ತಿಂಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ಜಂಟಿಯಾಗಿ ಕಬ್ಬಿನ ಎಫ್‌ಆರ್‌ಪಿ ಹಾಗೂ ಎಸ್‌ಎಪಿ ದರ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಇವರಿಗೆ ಸಲ್ಲಿಸಿದ ಮನವಿಯಲ್ಲಿ ಪ್ರತಿ ಟನ್‌ ಕಬ್ಬಿಗೆ 5,500 ದರ ನಿಗದಿ ಪಡಿಸಬೇಕು. ಬರಗಾಲ ಹಿನ್ನೆಲೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಪಾವತಿಸಿದ ರೈತರಿಗೆ ಶೇ.100ರಷ್ಟು ವಿಮಾ ಪರಿಹಾರ ಬಿಡುಗಡೆ ಮಾಡಬೇಕು. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅನುದಾನದಡಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು.

ಕಬ್ಬು ಬೆಂಕಿಗೆ ಆಹುತಿಯಾದ ರೈತರಿಗೆ ಪರಿಹಾರ, ಹಗಲು ವೇಳೆಯಲ್ಲಿ ನಿರಂತರ ಏಳು ಗಂಟೆ ವಿದ್ಯುತ್ ಪೂರೈಕೆ ಹಾಗೂ ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ತುರ್ತಾಗಿ ಘೋಷಿಸಬೇಕು. ಪ್ರತಿ ಟನ್‌ಗೆ ಮುಂಗಡವಾಗಿ 4 ಸಾವಿರ ರು. ನೀಡಿ, ಸರ್ಕಾರ ನಿಗದಿಪಡಿಸುವ ಅಂತಿಮ ದರದಂತೆ ಉಳಿದ ಹಣ ಪಾವತಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು. ಬೆಳಗಾವಿಯಲ್ಲಿ ಜೈಲ್ ಭರೋ ಚಳವಳಿ ಸೇರಿದಂತೆ ಮುಂದಿನ ಹಂತದ ಹೋರಾಟಗಳನ್ನು ರೂಪಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ ಹೊನ್ನಾ, ಮಲ್ಲಾರೆಡ್ಡಿ ಮುರಾಳ, ಅಶೋಕ ಕಾರಭಾರಿ, ಕೊಂಡಿಬಾರಾವ ಪಾಂಡ್ರೆ, ಗುಂಡುರೆಡ್ಡಿ, ಮಲ್ಲಿಕಾರ್ಜುನ ಬಿರಾದಾರ, ಸುಕೇಶ ರೆಡ್ಡಿ ಜೈನಾಪೂರ, ನಸೀರ್ ಅಹ್ಮದ್, ಬಾಬುರಾವ್‌ ಭೋಸ್ಗೆ, ಬಸವರಾಜ ಅಷ್ಟೂರ್, ಶಂಕರ ಪಾಟೀಲ, ವಿನೋದ ಚಿಂತಾಮಣಿ, ವಿಜಯಕುಮಾರ ಬಾವಗಿ, ರಾಜಕುಮಾರ ಸ್ವಾಮಿ, ಶಿವಾನಂದ ಗೋರಚಿಂಚೋಳಿ, ಪ್ರಭಾವತಿ ಚನ್ನಮಲ್, ಶಿವಾನಂದ ಸ್ವಾಮಿ, ಸಂತೋಷ ಗುದಗೆ, ಕಮಲಾಬಾಯಿ ಹಾಗೂ ರುದ್ರಯ್ಯ ಸ್ವಾಮಿ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.

ಪಡಿತರ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಸಕ್ಕರೆ ವಿತರಿಸಿ: ಸಕ್ಕರೆ ಕಾರ್ಖಾನೆಗಳು ಮತ್ತು ಮಧ್ಯವರ್ತಿಗಳಿಂದ ರೈತರ ಶ್ರಮದ ಲಾಭ ಬೇರೆಡೆಗೆ ಹೋಗುತ್ತಿದೆ. ಒಂದು ಟನ್ ಕಬ್ಬು ನುರಿಸುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿ ಗಳು 2 ರಿಂದ 3 ಸಾವಿರ ರು.ವರೆಗೆ ಪಡೆಯುತ್ತಿದ್ದಾರೆ ಎಂಬ ಆರೋಪವಿದೆ. ಈ ಲಾಭ ರೈತರಿಗೆ ದೊರೆಯುವಂತಾಗಬೇಕು. ಕೈಗಾರಿಕೆಗಳಿಗೆ ಮಾರಾಟ ಮಾಡುವ ವಾಣಿಜ್ಯ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವುದರ ಜೊತೆಗೆ ಬಡವರಿಗೆ ಪಡಿತರ ಮೂಲಕ ಕಡಿಮೆ ದರದಲ್ಲಿ ಸಕ್ಕರೆ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌