ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಾದಾಪುರ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯು ವಿಎಸ್‌ಎಸ್‌ಎನ್ ಸಬಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹೇಮಂತ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮಸ್ಥ, ನಿವೃತ್ತ ಸೈನಿಕ ಗಪ್ಪುಸೋಮಯ್ಯ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಸಲಾಗಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಅತೀಸೂಕ್ಷ್ಮ ಪ್ರದೇಶವೆಂದು ಪರಿಗಣಿತವಾಗುತ್ತದೆ. ಸೂರ್ಲಬ್ಬಿಯನ್ನು ಈ ಪ್ರದೇಶಕ್ಕೆ ಸೇರಿಸಲಾಗಿದ್ದು, 12 ಕಿ.ಮೀ.ವ್ಯಾಪ್ತಿಯ ಪ್ರದೇಶವನ್ನು ಸೇರ್ಪಡೆಗೊಳಿಸಿರುವುದರಿಂದ ಮಾದಾಪುರ ಗಡಿಭಾಗದ ಜನತೆಗೂ ಅತಂಕ ಸೃಷ್ಟಿಯಾಗಿದೆ ಎಂದರು.ವೈಮಾನಿಕ ಸರ್ವೇ ನಡೆಸಿ ಪಶ್ಚಿಮ ಪ್ರದೇಶವನ್ನು ಹಸಿರು ವಲಯ ಎಂದು ಭಾವಿಸಿ ಕಸ್ತೂರಿ ರಂಗನ್ ವರದಿಗೆ ಸೇರಿಸಿರುವುದರಿಂದ ಜನವಸತಿಯಲ್ಲಿರುವ ಬಹುತೇಕ ರೈತರು ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗಲಿದೆ. ಭೌತಿಕ ಸರ್ವೆ ನಡೆಸದೆ ಏಕಾಏಕಿ ಸೂಕ್ಷ್ಮ ಪ್ರದೇಶವೆಂದು ಸೇರಿ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಆದುದರಿಂದ ಈ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕೃಷ್ಣ ನಾಯರ್ ಮಾತನಾಡಿ, ಜಿಲ್ಲೆಯ 53 ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ಮಾದಾಪುರ ಗ್ರಾಮ ಪಂಚಾಯಿತಿ ಈ ವರದಿ ಒಳಪಡದಿದ್ದರೂ ಆದರೆ ಗಡಿಪ್ರದೇಶದ ಜನತೆಯು ಆತಂಕಕ್ಕೀಡಾಗಿದ್ದಾರೆ. ಗ್ರಾಮಸ್ಥರ ಅಭಿಪ್ರಾಯವನ್ನು ಸರ್ಕಾರಕ್ಕೆ ದಾಖಲಿಸಿಕೊಡಲಾಗುವುದು.