ಕಾರವಾರ: ಅಂಕೋಲಾ ತಾಲೂಕಿನ ಹೆಬ್ಬಾರಗುಡ್ಡ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸೋಮವಾರ ಸ್ಥಳೀಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಊರಿಗೆ ತೆರಳಲು ಸರ್ವಋತು ರಸ್ತೆಯಿಲ್ಲದೇ ಯಾರಾದರೂ ಅನಾರೋಗ್ಯಕ್ಕೊಳಗಾದರೆ ಆಸ್ಪತ್ರೆಗೆ ಜೋಳಿಗೆ ಕಟ್ಟಿ ಸಾಗಿಸುವ ಪರಿಸ್ಥಿತಿಯಿದೆ. ಇಲ್ಲಿನ ಮಳಗಾಂವದಿಂದ ಹೆಬ್ಬಾರಗುಡ್ಡದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೂ ಕೆಲಸ ಮಾತ್ರ ಪ್ರಾರಂಭಿಸಿಲ್ಲ. ಹೀಗಿದ್ದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಟೆಂಡರ್ ಪಡೆದವರ ಗುತ್ತಿಗೆ ರದ್ದುಮಾಡಿ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜಿಲ್ಲಾಡಳಿತ ಸ್ಥಳೀಯರ ಸಮಸ್ಯೆಗಳನ್ನು ಅರಿತು ಆದಷ್ಟು ಶೀಘ್ರದಲ್ಲಿ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದೇ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಛಾಯಾ ಗಾಂವಕರ, ಶೇಷ ಗಾಂವಕರ, ಸೀತಾ ಸಿದ್ದಿ, ದಯಾನಂದ ಸಿದ್ದಿ, ಬಾಬು ಸಿದ್ದಿ, ನಾಗರಾಜ ಬಾಂದಿ, ಸುರೇಶ ಸಿದ್ದಿ ಇದ್ದರು.