ವಸತಿ ನಿಲಯಕ್ಕೆ ಮೂಲಸೌಕರ್ಯ ಒದಗಿಸಲು ಆಗ್ರಹ

KannadaprabhaNewsNetwork |  
Published : Dec 15, 2023, 01:30 AM IST
ಯಾದಗಿರಿ ನಗರದ ಗಂಜ್ ಏರಿಯಾದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಸೌಲಭ್ಯ ಒದಗಿಸಲು ಆಗ್ರಹಿಸಿ ಕರವೇ ವಿದ್ಯಾರ್ಥಿ ಘಟಕದಿಂದ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಸತಿ ನಿಲಯಕ್ಕೆ ಮೂಲಸೌಕರ್ಯ ಒದಗಿಸಲು ಆಗ್ರಹಕರವೇ ವಿದ್ಯಾರ್ಥಿ ಘಟಕದಿಂದ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ

ಕರವೇ ವಿದ್ಯಾರ್ಥಿ ಘಟಕದಿಂದ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಗಂಜ್ ಏರಿಯಾದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ (ಹೊಸ) ವಸತಿ ನಿಲಯಕ್ಕೆ ವಾರ್ಡನ್ ನೇಮಿಸಿ, ಅವ್ಯವಸ್ಥೆಯ ಆಗರವಾಗಿರುವ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕ ವತಿಯಿಂದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಹೊನಗೇರಾ, ನಗರದ ಗಂಜ್ ಏರಿಯಾದಲ್ಲಿರುವ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಳೆದ ತಿಂಗಳು ಕೊನೆಯಲ್ಲಿ ಉಪ ಲೋಕಾಯುಕ್ತರು ಭೇಟಿ ಕೊಟ್ಟ ವೇಳೆ ಅವ್ಯವಸ್ಥೆ ಕಂಡು ವಾರ್ಡನ್ ಅವರನ್ನು ಅಮಾನತು ಮಾಡಿ ಹೋದರು. ಆಗಿನಿಂದ ಇಲ್ಲಿಯವರೆಗೆ ಬೇರೆ ವಾರ್ಡನ್ ಇಲ್ಲದೇ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದರು.

ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳಾದ ಬಕೆಟ್, ಜಗ್, ಇಲ್ಲದಿರುವುದು. ಕುಡಿಯುವ ನೀರು ಶುದ್ಧೀಕರಣ ಯಂತ್ರ ದುರಸ್ತಿಗೆ ಬಂದಿರುವುದರಿಂದ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶೌಚಾಲಯ ಸ್ವಚ್ಛತೆ ಇಲ್ಲ. ಊಟ ಗುಣಮಟ್ಟದ್ದಾಗಿರುವುದಿಲ್ಲ. ಕಳೆದೆರಡು ತಿಂಗಳಿನಿಂದ ಸೋಪು, ಪೇಸ್ಟ್, ಕೊಬ್ಬರಿ ಎಣ್ಣೆ ಸೇರಿ ಅವಶ್ಯಕ ಸಾಮಗ್ರಿಗಳ ಕಿಟ್ ಅನ್ನು ಸಹ ನೀಡುತ್ತಿಲ್ಲ. ಲೈಬ್ರರಿಯಲ್ಲಿ ಪುಸ್ತಕಗಳ ವ್ಯವಸ್ಥೆ ಇಲ್ಲ. ಹಾಸಿಗೆ, ಬೆಡ್ ಶಿಟ್ ಸೇರಿ ಯಾವುದೇ ಸಾಮಗ್ರಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಟೋಟಗಳ ಸಾಮಗ್ರಿ ನೀಡುತ್ತಿಲ್ಲ, ಇದಲ್ಲದೇ ಮಳೆ ಬಂದರೆ ಕಟ್ಟಡದಲ್ಲಿ ನೀರು ಸೋರುವುದು ಸೇರಿ ಸಾಲು ಸಾಲು ಸಮಸ್ಯೆಗಳಿವೆ. ಕೂಡಲೇ ಅರಿತುಕೊಂಡು ಸಮಸ್ಯೆ ಪರಿಹರಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕಳೆದ ತಿಂಗಳು ಉಪ ಲೋಕಾಯುಕ್ತರು ದಿಢೀರ್ ಭೇಟಿ ನೀಡಿ ವಸತಿ ನಿಲಯ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿ ವಾರ್ಡನ್ ಅಮಾನತು ಮಾಡಿದ್ದರು. ತದನಂತರ ಇದುವರೆಗೆ ವಾರ್ಡನ್ ಇಲ್ಲದೆ ವಸತಿ ನಿಲಯ ಅಧೋಗತಿಗಿಳಿದಿದೆ. ತಕ್ಷಣ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕರವೇ ವಿದ್ಯಾರ್ಥಿ ಘಟಕದ ಮುಖಂಡರಾದ ರವಿಚಂದ್ರ ತೆಲುಗರ, ಚೆನ್ನು ಹೊನಗೇರಾ, ಮನೋಜ್ ಕಿಲ್ಲನಕೇರಾ, ಮಲ್ಲು ಬಡಿಗೇರ, ರೆಡ್ಡಿ ಶಹಾಪುರ, ಮಲ್ಲಪ್ಪ ಕುರಕುಂದಿ, ಮಹೇಶ ಅಲ್ಲಿಪುರ, ಸಾಬಣ್ಣ, ಸುಗುರೇಶ ಬಿಳ್ಹಾರ, ಮಂಜು ಆಶನಾಳ, ದೇವು ತುಮಕೂರು, ಮಂಜು ತುಮಕೂರು, ಮರೆಪ್ಪ ಚಿಗಾನೂರ, ಕರಣ ರಾಠೋಡ ಸೇರಿ ಇತರರಿದ್ದರು.

- - - -

14ವೈಡಿಆರ್9:

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ