ಗದಗ: ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಘಟಕ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ ವತಿಯಿಂದ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿರುವ ₹5000 ಗೌರವಧನವನ್ನು ₹8000 ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಭರವಸೆ ಕೊಟ್ಟಂತೆ ಹೆಚ್ಚಳ ಮಾಡಿಲ್ಲ. ರಾಜ್ಯದಲ್ಲಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಕಾರ್ಯಕರ್ತೆಯರನ್ನು ಕೈಬಿಡುವುದಾಗಿ ಹೊರಡಿಸಿರುವ ಆದೇಶ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ ಆಗಿದೆ.
ಹಾಗೆಯೇ ಕೈಬಿಟ್ಟ ಆಶಾಗಳಿಗೆ ಹೊಸ ಗುತ್ತಿಗೆ ಗ್ರೂಪ್ ಡಿ ನೌಕರಿ ಕೆಲಸ ನೀಡುವುದಾಗಿ ತಿಳಿಸಲಾಗಿದೆ. ಆದರೆ ಬಹುತೇಕ ಆಶಾಗಳನ್ನು ಕೈಬಿಡುವ ಹುನ್ನಾರ ಆಗಿದೆ. ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಇಲ್ಲದಿರುವುದು ನಮ್ಮ ರಾಜ್ಯದ ಆರೋಗ್ಯ ಇಲಾಖೆ ತರ್ಕಬದ್ಧಗೊಳಿಸುವ ಈ ಹುನ್ನಾರ ಆಶಾಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಕಳೆದ ವರ್ಷ ಆಶಾ ಸುಗಮಕಾರರನ್ನು ಕೈಬಿಟ್ಟಿರುವುದು ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ₹15000 ಗೌರವಧನ ನೀಡಬೇಕು. ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹5000ದಿಂದ ₹8000ಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು ಎಂದರು.ತೀವ್ರತರ ರೋಗಗಳ ಚಿಕಿತ್ಸಾ ವೆಚ್ಚಕ್ಕಾಗಿ ಕಾರ್ಪಸ್ ಫಂಡ್ ಮಾಡಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬೇಕು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ(3 ತಿಂಗಳು) ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.