ಮೂಡುಬಿದಿರೆ ಪಾರ್ಕಿಂಗ್‌ ಅವ್ಯವಸ್ಥೆ: ಅಧಿಕಾರಿಗಳ ಸಭೆ

KannadaprabhaNewsNetwork |  
Published : Dec 20, 2023, 01:15 AM IST
ಮೂಡುಬಿದಿರೆ ಪಾರ್ಕಿಂಗ್ ಅವ್ಯವಸ್ಥೆ-ಅಧಿಕಾರಿಗಳ ಸಭೆ ಬಸ್‌ಗಳ ಸಮಯ ಪರಿಪಾಲನೆ - ಎಕ್ಸ್ಪ್ರೆಸ್ ಬಸ್‌ಗಳ ಅನಧಿಕೃತ ನಿಲುಗಡೆಗೆ ಕ್ರಮ   | Kannada Prabha

ಸಾರಾಂಶ

ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಖಾಸಗಿ ಬಸ್‌ಗಳಿಂದಾಗುವ ಸಮಸ್ಯೆಗಳ ಕುರಿತು ಪುರಸಭೆ, ಪೋಲಿಸ್, ಬಸ್ ಮಾಲಕರು ಹಾಗೂ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳ ಮಾಲಕರ ಜೊತೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆ ನಡೆಯಿತು. ಬಸ್‌ಗಳು ಸಮಯ ಪಾಲನೆ ಮಾಡಬೇಕು ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳ ವೇಗಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಂಗಳೂರಿನಿಂದ- ಕಾರ್ಕಳಕ್ಕೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಸೂಚಿತ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೊಳಿಸಬೇಕು. ನಿಗದಿತ ವೇಳಾಪಟ್ಟಿಯಂತೆ ಸಂಚರಿಸಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಬಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಬಾರದು. ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡುವ ಬಸ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ, ದಾಖಲೆ ಸಹಿತ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಹೇಳಿದರು.

ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಖಾಸಗಿ ಬಸ್‌ಗಳಿಂದಾಗುವ ಸಮಸ್ಯೆಗಳ ಕುರಿತು ಪುರಸಭೆ, ಪೋಲಿಸ್, ಬಸ್ ಮಾಲಕರು ಹಾಗೂ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳ ಮಾಲಕರ ಜೊತೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಬಸ್ ಮಾಲಕರ ಸಂಘದಿಂದ ಕೈಗೊಂಡ ನಿರ್ಣಯಗಳ ಕುರಿತ ಪತ್ರವನ್ನು ಅವರು ಸಭೆಯ ಮುಂದಿಟ್ಟರು.

ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ, ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಚತುಷ್ಪಕ್ರ, ದ್ವಿಷಕ್ರ ವಾಹನಗಳ ಪಾರ್ಕಿಂಗ್‌ಗೆ ಮಾರ್ಕ್ ಮಾಡಲಾಗುವುದು. ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ವ್ಯವಸ್ಥೆ ಸರಿಪಡಿಸಿ ಅಲ್ಲಿಯೂ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ನೀಡಲಾಗುವುದು. ಮುಖ್ಯ ರಸ್ತೆಯ ಲಭ್ಯವಿರುವ ಸ್ಥಳದಲ್ಲಿಯೂ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಗುರುತಿಸಲಾಗುವುದು ಎಂದರು.

ಉದ್ಯಮಿ ಅಕ್ಷಯ್‌ಕುಮಾರ್ ಮಾತನಾಡಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ವಿದ್ಯಾಗಿರಿ, ಅಲಂಗಾರು, ಮಹಾವೀರ ಕಾಲೇಜು ಬಳಿಕ ಅತೀ ವೇಗದಿಂದ ಸಂಚರಿಸುತ್ತವೆ. ಶಾಲೆ, ಆಸ್ಪತ್ರೆ ವಠಾರದಲ್ಲಿ ಕರ್ಕಶ ಹಾರ್ನ್ ಬಳಸುತ್ತಾರೆ. ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಗಮನಕ್ಕೆ ತಂದರು. ಬಸ್ ಮಾಲಕರು, ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಉದ್ದಿಮೆದಾರರು ತಮ್ಮ ಅಹವಾಲುಗಳನ್ನು ಮಂಡಿಸಿದರು. ಆರಕ್ಷಕ ಉಪನಿರೀಕ್ಷಕ ಸಿದ್ದಪ್ಪ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ