ಕಂಪ್ಲಿ: ಎಲ್‌ಎಲ್ ಕಾಲುವೆಗೆ ಸದ್ಯ ಕೇವಲ 400 ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿರುವುದರಿಂದ ಕಾಲುವೆಯ ತೂಬುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು ಸಿಗದೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು, ಕೂಡಲೇ ಕರ್ನಾಟಕ–ಆಂಧ್ರಪ್ರದೇಶದ ಜಂಟಿ ಕೋಟಾದ ನೀರನ್ನು ಬಳಸಿಕೊಂಡು ಎಲ್‌ಎಲ್ ಕಾಲುವೆಗೆ 1800 ಕ್ಯೂಸೆಕ್ ನೀರು ಹರಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವೀರೇಶ್ ಆಗ್ರಹಿಸಿದರು.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಜಂಟಿ ಕೋಟಾದ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಎರಡೂ ಕೋಟಾಗಳ ನೀರನ್ನು ಸೇರಿಸಿ ಎಲ್‌ಎಲ್ ಕಾಲುವೆಗೆ ಕನಿಷ್ಠ 1800 ಕ್ಯೂಸೆಕ್ ನೀರು ಹರಿಸಬೇಕು. ಈ ಹಿಂದೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗಾಗಿ 1700 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸುವ ಸಂದರ್ಭದಲ್ಲಿ ರಾಜ್ಯದ ರೈತರ ಅಭಿಪ್ರಾಯವನ್ನು ಕೇಳಿರಲಿಲ್ಲ. ಆದರೆ ಇದೀಗ ರೈತರ ಬೆಳೆಗಳಿಗೆ ನೀರು ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ನೀರಿನ ಹರಿವನ್ನು ಕಡಿತಗೊಳಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ತೋರುವ ಕಾಳಜಿಯನ್ನು ಜನಪ್ರತಿನಿಧಿಗಳು ತುಂಗಭದ್ರಾ ನದಿ ಹಾಗೂ ಅದರ ಕಾಲುವೆಗಳ ನೀರಿನ ವಿಚಾರದಲ್ಲಿಯೂ ತೋರಿಸಬೇಕು. ತುಂಗಭದ್ರಾ ಜಲಾಶಯದ ನೀರಿನ ಮೇಲೆ ಅವಲಂಬಿತವಾಗಿರುವ ಸಾವಿರಾರು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಎಲ್‌ಎಲ್ ಕಾಲುವೆಗೆ 1800 ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿದರು.ಸಮರ್ಪಕ ಪ್ರಮಾಣದ ನೀರು ಹರಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಗುರುವಾರ ಕಂಪ್ಲಿಯ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.