ಬೇಸಿಗೆ ಬೆಳೆಗೆ ನೀರು ಬಿಡಲು ಭಾರತ ಕಿಸಾನ್ ಸಭಾ ಆಗ್ರಹ

KannadaprabhaNewsNetwork |  
Published : Nov 11, 2025, 02:30 AM IST
ಫೊಟೊ ೧೦ಕೆಆರ್‌ಟಿ೧: -ಕಾರಟಗಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಭತ್ತಕ್ಕೆ ಬೆಂಬಲ ಬೆಲೆ ನೀಡಬೇಕು, ಅಕಾಲಿಕ ಮಳೆಗೆ ನಷ್ಟವಾದ ಬೆಳೆಗೆ ಪರಿಹಾರ ನೀಡಬೇಕು ಹಾಗೂ ಬೇಸಿಗೆ ಬೆಳೆಗೆ ನೀರು ಬಿಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ಕಾರಟಗಿ ಪಟ್ಟಣದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಕಾರಟಗಿ: ಬತ್ತಕ್ಕೆ ಬೆಂಬಲ ಬೆಲೆ ನೀಡಬೇಕು, ಅಕಾಲಿಕ ಮಳೆಗೆ ನಷ್ಟವಾದ ಬೆಳೆಗೆ ಪರಿಹಾರ ನೀಡಬೇಕು ಹಾಗೂ ಬೇಸಿಗೆ ಬೆಳೆಗೆ ನೀರು ಬಿಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಇಲ್ಲಿನ ವಿಶೇಷ ಎಪಿಎಂಸಿ ಯಾರ್ಡ್‌ನಲ್ಲಿ ಸೇರಿದ ಕಿಸಾನ್ ಸಭಾದ ಕಾರ್ಯಕರ್ತರು, ತಹಸೀಲ್ದಾರ್ ಕಚೇರಿಗೆ ನಿಯೋಗದಲ್ಲಿ ತೆರಳಿ, ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಎಐಕೆಎಸ್ ಜಿಲ್ಲಾಧ್ಯಕ್ಷ ಎ. ಹುಲಗಪ್ಪ, ತಾಲೂಕಿನಾದ್ಯಂತ ರೈತ ಕುಟುಂಬಗಳು ಭತ್ತದ ಬೆಳೆಯನ್ನು ನೆಚ್ಚಿಕೊಂಡು ಜೀವನ ನಿರ್ವಹಣೆ ಮಾಡುತ್ತಿವೆ. ಆದರೆ, ಅಕಾಲಿಕ ಮಳೆ ಬಂದು ರೈತರು ಬೆಳೆದ ಭತ್ತದ ಬೆಳೆ ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಇಲ್ಲಿಯವರೆಗೂ ನಷ್ಟದ ಬೆಳೆಗೆ ಪರಿಹಾರ ನೀಡಿಲ್ಲ. ರೈತರು ಬೆಳೆಗೆ ಆದ ನಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಮೆ ಹಣವನ್ನು ತಾವೇ ಭರಿಸಿ ಕೂಡಲೆ ರೈತರಿಗೆ ಪರಿಹಾರ ನೀಡಬೇಕು. ಈ ಭಾಗದಲ್ಲಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ. ಸರ್ಕಾರ ಬತ್ತಕ್ಕೆ ₹೨೩೦೦ ದರ ನಿಗದಿಪಡಿಸಬೇಕು ಹಾಗೂ ಕೂಡಲೇ ಬತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ ದುರಸ್ತಿ ಮಾಡಬೇಕು. ರೈತರ ಹಿತ ಕಾಪಾಡುವ ಮೂಲಕ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ನಡೆಸಲಿ. ಬೆಳೆ ಹಾನಿಗೀಡಾಗಿ ಸಂಕಷ್ಟದಲ್ಲಿರುವ ರೈತರಿಗೆ ಬೇಸಿಗೆ ಬೆಳೆಯೇ ಆಧಾರ. ಆ ನಿಟ್ಟಿನಲ್ಲಿ ರೈತರಿಗೆ ಮುಂದಿನ ಬೆಳೆಗೆ ನೀರಿನ ಅನುಕೂಲ ಮಾಡಿಕೊಟ್ಟು ಬಳಿಕ ಕ್ರಸ್ಟಗೇಟ್‌ ದುರಸ್ತಿ ಕಾರ್ಯ ನಡೆಸಲಿ ಎಂದು ಮನವಿ ಮಾಡುತ್ತಿದ್ದೇವೆ ಎಂದರು.

ಅಕ್ಷರ ದಾಸೋಹ ತಾಲೂಕು ಅಧ್ಯಕ್ಷೆ ನೀಲಮ್ಮ, ಜಿಲ್ಲಾ ಸಂಚಾಲಕಿ ಸುನೀತಾ ಮಾತನಾಡಿ, ಎರಡನೇ ಬೆಳೆಗೆ ನೀರಿಲ್ಲ ಎಂಬ ವಿಷಯ ರೈತರನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ಮೂಲಕ ಜಲಾಶಯದ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಕೂಡಲೇ ನಡೆಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್‌ ಜಗದೀಶ ಅವರಿಗೆ ಸಲ್ಲಿಸಿದರು.

ಈ ವೇಳೆ ಎಐಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಣ ನಾಯಕ, ಕಾರ್ಯದರ್ಶಿ ಮಲ್ಲಮ್ಮ ಯರಡೊಣಾ, ಎಲ್. ತಿಮ್ಮಣ್ಣ, ಮಂಜುನಾಥ ಗುಡೂರ, ತಿಮ್ಮಣ್ಣ ಪೂಜಾರಿ, ಕಂತೆಪ್ಪ ಸಿಂಗನಾಳ ಹಾಗೂ ಭಾರತ ಕಿಸಾನ್ ಸಭಾದ ಸದಸ್ಯರು ಇದ್ದರು.

PREV

Recommended Stories

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ
ಪ್ರೇರಣಾ ಸಂಸ್ಥೆ ಜನಸಾಮಾನ್ಯರಿಗೆ ಮರಣಶಾಸನ: ಸುರೇಶ ಭೂಮರಡ್ಡಿ