ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಿರಾ ತಾಲೂಕಿನ ಹುಲಿಕುಂಟೆ, ಗೌಡಗೆರೆ ಮತ್ತು ಬುಕ್ಕಾಪಟ್ಟಣ ಹೊಬಳಿಗಳ ಕೆರೆಗಳಿಗೆ ಭದ್ರಾ ನಾಲೆಯಿಂದ ನೀರು ಹರಿಸಬೇಕೆಂದು ಜಿಲ್ಲಾ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಗೃಹಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಿರಾ ತಾಲೂಕಿನ ಹುಲಿಕುಂಟೆ, ಗೌಡಗೆರೆ ಮತ್ತು ಬುಕ್ಕಾಪಟ್ಟಣ ಹೊಬಳಿಗಳ ಕೆರೆಗಳಿಗೆ ಭದ್ರಾ ನಾಲೆಯಿಂದ ನೀರು ಹರಿಸಬೇಕೆಂದು ಜಿಲ್ಲಾ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಗೃಹಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಹೇಮಾವತಿ ನೀರು ಹಂಚಿಕೆಯಾಗಿರುವ ಪ್ರದೇಶದೊಳಕ್ಕೆ ಭದ್ರಾ ಮೇಲ್ದಂಡೆ ನೀರನ್ನು ಹರಿಸುವ ಪ್ರಯತ್ನ ಸಾಧುವಲ್ಲ. ಭವಿಷ್ಯದಲ್ಲಿ ಹೇಮಾವತಿ ನಾಲೆ ನೀರಿಗೆ ಭಂಗ ಉಂಟಾಗಬಹುದಾಗಿದೆ. ಆದ್ದರಿಂದ ಭದ್ರಾ ನಾಲೆಯಿಂದ ನೇರವಾಗಿ ಬುಕ್ಕಾಪಟ್ಟಣ, ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ತುರ್ತಾಗಿ ಮಾಡಬೇಕಾಗಿದೆ. ಸುತ್ತಿ ಬಳಸಿ ನೀರು ತೆಗೆದುಕೊಂಡು ಹೋಗುವ ಬದಲು ಭದ್ರಾ ಮೇಲ್ದಂಡೆ ಯೋಜನೆ ಕೊಳಾಯಿನ್ನು ಸಿಎಚ್ 12+846 ಸ್ಥಳದಿಂದ ಹುಳಿಗೆರೆ ಕೆರೆ ಏರಿಗೆ ನೇರವಾಗಿ ಹರಿಸಬಹುದು. ಮುಂದಕ್ಕೆ ನೀರು ನೈಸರ್ಗಿಕವಾಗಿ ಹರಿಯುತ್ತದೆ. ಇದರಿಂದ 600ಕೋಟಿ ರು. ವೆಚ್ಚ ಕಡಿಮೆಯಾಗುತ್ತದೆ ಎಂಬುದು ನೀರಾವರಿ ತಜ್ಞರೊಬ್ಬರ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಬುಕ್ಕಾಪಟ್ಟಣ ಹೋಬಳಿಯ ಹುಯಿಲ್‌ದೊರೆ ಗ್ರಾಪಂನ ಪುರಸಮ್ಮನ ಕೆರೆಗೂ ಹಾಗೂ ದೊಡ್ಡ ಅಗ್ರಹಾರದ ಕೆರೆಗೂ ನೀರು ಹರಿಸಬೇಕಾಗಿ ಒತ್ತಾಯಿಸುತ್ತೇನೆ.
ಚಿಕ್ಕಸಂದ್ರಕೆರೆ ಮಾರ್ಗವಾಗಿ ಗೌಡಗೆರೆ ಹೋಬಳಿಯ ಕೆರೆಗಳಿಗೆ ನೀರು ಹರಿಸಲು ಸುಲಭ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಒಟ್ಟಾರೆ ಸಿರಾ ತಾಲೂಕಿನ 38 ಕೆರೆಗಳಿಗೆ ನೀರಿನ ಹಂಚಿಕೆ ದೊರೆತಿಲ್ಲ. ಇವು ಬಹುತೇಕ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗೆ ಸಂಬಂಧಿಸಿವೆ.
ಈ ಬಗ್ಗೆ ಸರ್ಕಾರ ತುರ್ತುಕ್ರಮ ಕೈಗೊಳ್ಳದಿದ್ದಲ್ಲಿ ರೈತ ಕಾರ್ಮಿಕರು, ಸಂಘ ಸಂಸ್ಥೆಗಳು ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೋರಾಟ ಸಮಿತಿ ಸದಸ್ಯರಾದ ಕೆ.ಎಸ್.ಧನಂಜಯಾರಾಧ್ಯ, ನಾದೂರು ಕೆಂಚಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್, ಜಿ.ಎಂ. ರಂಗನಾಥಗೌಡ, ಎಂ.ಆರ್. ಕರಿಯಪ್ಪ, ಬಿ.ಆರ್. ರಘುರಾಮ್, ಮುಕುಂದಪ್ಪ, ಜಿ.ಎಚ್ ವೆಂಕಟೇಶ್ ಮುಂತಾದವರು ಸರ್ಕಾರವನ್ನು ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.