ಮುಖ್ಯೋಪಾಧ್ಯಾಯರಿಗೆ ಬಿಸಿಯೂಟದಿಂದ ಮುಕ್ತಿ ನೀಡಲು ಆಗ್ರಹ

KannadaprabhaNewsNetwork | Published : Nov 30, 2024 12:48 AM

ಸಾರಾಂಶ

ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯಿಂದ ಮುಖ್ಯಗುರುಗಳನ್ನು ಮುಕ್ತಗೊಳಿಸಬೇಕು ಎಂದು ಕೊಪ್ಪಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪಳ: ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯಿಂದ ಮುಖ್ಯಗುರುಗಳನ್ನು ಮುಕ್ತಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.

ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯೋಪಾಧ್ಯಾಯರ ಬಹುದಿನದ ಸಮಸ್ಯೆಯಾದ ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ, ಮೊಟ್ಟೆಯ ಮಾರುಕಟ್ಟೆ ಬೆಲೆ ಹಾಗೂ ಸರ್ಕಾರ ನಿಗದಿಪಡಿಸಿದ ಬೆಲೆಗೂ ಬಹಳಷ್ಟು ವ್ಯತ್ಯಾಸವಾಗುತ್ತಿದ್ದು, ಮುಖ್ಯೋಪಾಧ್ಯಾಯರಿಗೆ ಮೊಟ್ಟೆ ಖರೀದಿಯಲ್ಲಿ ಆಗುತ್ತಿರುವ ತೊಂದರೆ, ಮೊಟ್ಟೆಯ ಬದಲಾಗಿ ಹಳ್ಳಿಗಳಲ್ಲಿ ಬಾಳೆಹಣ್ಣಿನ ಆಲಭ್ಯತೆ, ಅಡುಗೆ ದಿನಸಿ ಹಾಗೂ ತರಕಾರಿ ಖರೀದಿಗಳಲ್ಲಿ ಉಂಟಾಗುತ್ತಿರುವ ಅನನುಕೂಲತೆ ಮತ್ತು ಎದುರಿಸುತ್ತಿರುವ ಸಮಸ್ಯೆಗಳಿಂದ ಮುಖ್ಯೋಪಾಧ್ಯಾಯರಿಗೆ ಸಾಕುಬೇಕಾಗಿದೆ.

ಬಿಸಿಯೂಟದ ಪ್ರತ್ಯೇಕ ಖರೀದಿ ವಹಿ, ವಿತರಣಾ ವಹಿ, ಮಕ್ಕಳಿಂದ ಸ್ವೀಕೃತಿ ವಹಿ, ಫಲಾನುಭಾವಿಗಳ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಂದೇ ಇಂದಿಕರಿಸಬೇಕಿದೆ. ನಿಗದಿತ ಗುಣಮಟ್ಟದ, ತೂಕದ ಮೊಟ್ಟೆಗಳನ್ನು ವಿತರಿಸಲು ಪೂರೈಕೆದಾರರು ನಿರಾಕರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಂತಹ ನಗರಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯವೂ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಕ್ಕಿ ಖರೀದಿಗೆ ಸಮಸ್ಯೆಯಾಗುತ್ತಿದೆ.

ಹೀಗಾಗಿ, ಮುಖ್ಯಗುರುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೆಲಸದ ಒತ್ತಡಗಳ ನಡುವೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮಾನಸಿಕವಾಗಿ ಕುಗ್ಗಿದ್ದು, ಸರಿಯಾಗಿ ಶಾಲಾ ಕರ್ತವ್ಯ ನಿರ್ವಹಿಸಲಾಗುತ್ತಿಲ್ಲ. ಇದರಿಂದ ಮಕ್ಕಳ ಗುಣಾತ್ಮಕ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಆದಕಾರಣ ಮುಖ್ಯಗುರುಗಳನ್ನು ಮಧ್ಯಾಹ್ನದ ಬಿಸಿಯೂಟದಿಂದ ಮುಕ್ತಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ವಿವರವಾಗಿ ಆಗ್ರಹಿಸಲಾಗಿದೆ.

ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಿ., ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಬಳ್ಳೊಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ತಾಲೂಕು ಉಪಾಧ್ಯಕ್ಷ ಸುಮತಿ ಸಿ. ಕುಕನೂರು, ಪ್ರಧಾನ ಕಾರ್ಯದರ್ಶಿ ಮಹಾವೀರ ಕಲಬಾವಿ, ಪತ್ತಿನ ಅಧ್ಯಕ್ಷ ವೀರೇಶ ಅರಳಿಕಟ್ಟಿ, ಉಪಾಧ್ಯಕ್ಷೆ ಪೂರ್ಣಿಮಾ ಪಟ್ಟಣಶೆಟ್ಟಿ, ಸಂಘದ ನಿರ್ದೇಶಕರಾದ ಕೊಟ್ರಪ್ಪ ಗಡಗಿ, ಮಹೇಶ ಟಂಕಸಾಲಿ, ಗವಿಸಿದ್ದಪ್ಪಕೇರಿ, ರಮೇಶ ಬುಡ್ಡನಗೌಡ್ರ, ಗೀತಾ ಚಕ್ಕಡಿ, ಹಿರಿಯ ಮುಖ್ಯಗುರುಗಳಾದ ದೇವೇಂದ್ರಪ್ಪ ಕುರುಡಗಿ ರಂಗನಾಥ ಪಾಟೀಲ‌. ಸುಭಾಶರಡ್ಡಿ, ನಾರಾಯಣಪ್ಪ ಚಿತ್ರಗಾರ, ಬಸವರಾಜ ಕೋಮಲಾಪುರ ಇದ್ದರು.

Share this article