ಅವೈಜ್ಞಾನಿಕ ಚೆಕ್‌ಡ್ಯಾಂನ ತಡೆಗೋಡೆ ತೆರವಿಗೆ ಆಗ್ರಹ

KannadaprabhaNewsNetwork |  
Published : May 30, 2026, 02:30 AM IST
ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ಎಮ್ಮೆಯೊಂದು ಸಿಲುಕಿ ಮೃತಪಟ್ಟಿದೆ. | Kannada Prabha

ಸಾರಾಂಶ

ಚೆಕ್‌ಡ್ಯಾಂನ ತಡೆಗೋಡೆ ತೆರವುಗಳಿಸಿ, ಅಲ್ಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು

ಸಂಡೂರು: ತಾಲೂಕಿನ ಜೋಗ ಗ್ರಾಮದ ಬಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚೆಕ್‌ಡ್ಯಾಂನಿಂದ ಗ್ರಾಮಸ್ಥರಿಗೆ ಹಲವು ರೀತಿಯ ತೊಂದರೆಗಳಾಗುತ್ತಿವೆ. ಆದ್ದರಿಂದ ಈ ಚೆಕ್‌ಡ್ಯಾಂನ ತಡೆಗೋಡೆ ತೆರವುಗಳಿಸಿ, ಅಲ್ಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಗ್ರಾಮದ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳಿಂದ ಜೋಗ ಗ್ರಾಮದ ಬಳಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸಂಗ್ರಹಗೊಂಡ ನೀರು ಗ್ರಾಮದಲ್ಲಿನ ಹೊಲಮನೆಗಳಿಗೆ ನುಗ್ಗಿ ಬಹಳ ತೊಂದರೆ ಉಂಟಾಗಿದೆ.

ಬುಧವಾರ ಚೆಕ್‌ಡ್ಯಾಂನಲ್ಲಿನ ಕೊಳಚೆ ನೀರಿನಲ್ಲಿ ಕಾಗೆರ ಚೆನ್ನವೀರಪ್ಪ ಎಂಬವವರ ಎಮ್ಮೆಯೊಂದು ಸಿಲುಕಿಕೊಂಡು ಮೃತಪಟ್ಟಿದೆ. ಕಾಗೆರ ಚೆನ್ನವೀರಪ್ಪ ಅವರು ಈ ಎಮ್ಮೆಯನ್ನು ₹೬೦ ಸಾವಿರಕ್ಕೆ ಕೊಂಡು ತಂದಿದ್ದರು. ಇನ್ನು ಕೆಲವೇ ದಿನಗಳಲ್ಲಿ ಕರ ಹಾಕುವ ಹಂತದಲ್ಲಿತ್ತು. ಜೀವನಕ್ಕೆ ಆಸರೆಯಾಗಬೇಕಿದ್ದ ಎಮ್ಮೆ ಚೆಕ್‌ಡ್ಯಾಂನಲ್ಲಿ ಸಿಲುಕಿ ಮೃತಪಟ್ಟಿದೆ.

ಸಮಗ್ರ ಕೃಷಿ ಯೋಜನೆ ಅಡಿಯಲ್ಲಿ ಕೋಳಿಗಳನ್ನು ಪಡೆದು ಸಾಕಣೆ ಮಾಡಿಕೊಂಡಿದ್ದ ಗ್ರಾಮದ ಹೊನ್ನೂರಪ್ಪ, ಬಳ್ಳಾರಿ ಸಣ್ಣ ಯಂಕಪ್ಪ, ಎ.ಕೆ. ಅಂಜನಿ, ಬಳ್ಳಾರಿ ಹೊನ್ನೂರಸ್ವಾಮಿ ಹಾಗೂ ಬಿ. ಶರಣ ಎಂಬವರ ನೂರಾರು ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ನಾಲ್ಕು ತಿಂಗಳ ಹಿಂದೆ ಸಮಗ್ರ ಕೃಷಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಕೋಳಿಗಳನ್ನು ಪಡೆದು, ಸಾಕಾಣಿಕೆ ಮಾಡಿಕೊಂಡಿದ್ದರು. ಅಕಾಲಿಕ ಮಳೆಯಿಂದಾಗಿ ಕುರಿ, ಕೋಳಿಗಳು ನಾಶವಾಗಿವೆ.

ಮಳೆ ಅನಾಹುತ ವೀಕ್ಷಣೆ ಮಾಡಿದ ಅಧಿಕಾರಿಗಳು ಕೂಡಲೇ ಅಲ್ಲಿನ ಅವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿ ಹೋದವರು ಇತ್ತ ಸುಳಿದಿಲ್ಲ. ಮೊದಲ ಮಳೆಗೆ ಇಷ್ಟೆಲ್ಲ ಅನಾಹುತ ಕಂಡಿರುವ ಗ್ರಾಮದ ಜನತೆ ಮುಂಬರುವ ಮಳೆಗಳಿಂದ ಉಂಟಾಗಬಹುದಾದ ಅನಾಹುತಗಳಿಂದ ಆತಂಕಗೊಂಡಿದ್ದಾರೆ. ಗ್ರಾಮಕ್ಕೆ ಗಂಡಾಂತರವಾಗಿರುವ ಚೆಕ್‌ಡ್ಯಾಂನ ಅಡ್ಡಗೋಡೆ ತೆರವುಗೊಳಿಸಿ, ಅಲ್ಲಿ ಸಂಗ್ರಹಗೊಳ್ಳುವ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆ ನಿರ್ಲಕ್ಷ್ಯ ಧೋರಣೆ ಆರೋಪ: ಮಾಜಿ ಸದಸ್ಯ ಪ್ರತಿಭಟನೆ
ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನಿರೀಕ್ಷೆ!