ತಾಲೂಕಿನ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ

KannadaprabhaNewsNetwork | Published : Oct 8, 2024 1:04 AM

ಸಾರಾಂಶ

ಪಾವಗಡ ತಾಲೂಕಿನ ಅನೇಕ ಗಡಿ ಗ್ರಾಮಗಳಿಗೆ ಹೋಗಿಬರಲು ತೀವ್ರ ಸಮಸ್ಯೆ ಎದುರಾಗುತ್ತಿದ್ದು ಸೂಕ್ತ ಗ್ರಾಮೀಣ ರಸ್ತೆಯ ವ್ಯವಸ್ಥೆ ಕಲ್ಪಿಸಬೇಕು. ಕೂಲಿಕಾರ್ಮಿಕರ ಸಮಸ್ಯೆಗಳು ಹೆಚ್ಚಾಗಿದ್ದು, ಆಧುನಿಕ ಯಂತ್ರೋಪಕರಣ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಅನೇಕ ಗಡಿ ಗ್ರಾಮಗಳಿಗೆ ಹೋಗಿಬರಲು ತೀವ್ರ ಸಮಸ್ಯೆ ಎದುರಾಗುತ್ತಿದ್ದು ಸೂಕ್ತ ಗ್ರಾಮೀಣ ರಸ್ತೆಯ ವ್ಯವಸ್ಥೆ ಕಲ್ಪಿಸಬೇಕು. ಕೂಲಿಕಾರ್ಮಿಕರ ಸಮಸ್ಯೆಗಳು ಹೆಚ್ಚಾಗಿದ್ದು, ಆಧುನಿಕ ಯಂತ್ರೋಪಕರಣ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.

ತಾಲೂಕು ಹಾಗೂ ಜಿಲ್ಲೆಯ ವಿವಿಧ ರೀತಿಯ ತೋಟಗಾರಿಕೆ ಬೆಳೆಗಾರರ ಸಮಸ್ಯೆ ಹಿನ್ನಲೆಯಲ್ಲಿ ರೈತ ಸಂಘದಿಂದ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ತಾಲೂಕಿನ ಅನೇಕ ಗಡಿ ಗ್ರಾಮಗಳಿಗೆ ರಸ್ತೆಗಳಿಲ್ಲ, ಮುಖ್ಯ ರಸ್ತೆಯ ಬಸ್‌ ನಿಲ್ದಾಣದಿಂದ ಇಳಿದು ಜಮೀನುಗಳಲ್ಲಿ ತೆರಳಿ ತಮ್ಮ ಊರುಗಳಿಗೆ ಸೇರುವ ಅನಿರ್ವಾಯತೆ ಇದೆ. ಇದರಿಂದ ಜಮೀನಿನ ರೈತರು ದಾರಿ ಬಿಡದೆ ಜನಸಾಮಾನ್ಯರಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಅಲ್ಲಿನ ಸಾರ್ವಜನಿಕರಿಂದ ದೂರುಗಳು ಬಂದಿವೆ. ಗಡಿ ಗ್ರಾಮಗಳಿಗೆ ತೆರಳಲು ಕೂಡಲೇ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿನ ಹುಣಿಸೆ ರೈತರ ಜೀವನಾಡಿ ಬೆಳೆಯಾಗಿದ್ದು ಸಾಕಷ್ಟು ಬಡ ರೈತರು ಅದರ ವ್ಯಾಪಾರದಿಂದ ಜೀವನ ನಡೆಸುತ್ತಿದ್ದಾರೆ. ಕೂಲಿ ಕೆಲಸದ ಹಿನ್ನಲೆಯಲ್ಲಿ ಇಲ್ಲಿನ ಬಹುತೇಕ ಕೂಲಿಕಾರರು ಬೆಂಗಳೂರು ತುಮಕೂರು ಹಾಗೂ ಇತರೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು ಕೂಲಿಕಾರರ ಸಮಸ್ಯೆಯಾಗಿದೆ. ಹೀಗಾಗಿ ಫಸಲಿಗೆ ಬಂದ ಹುಣಿಸೆಕಾಯಿ ಮರಗಳಲ್ಲಿಯೇ ಉಳಿಯುವಂತಾಗಿದೆ. ಅಲ್ಲದೇ ಬೃಹತ್‌ ಗಾತ್ರದ ಮರ ಹತ್ತುವುದರಿಂದ ಕೊಂಬೆ ಕಟ್ಟಾಗುವುದು ಮತ್ತು ಇನ್ನಿತರೆ ಅನಾಹುತದಿಂದ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಇನ್ನೂ ತಾಲೂಕಿನಲ್ಲಿ ಅರ್ಧದಷ್ಟು ರೈತರು ಹೂವಿನ ವ್ಯಾಪಾರದಿಂದ ಜೀವನ ನಡೆಸುತ್ತಿದ್ದು, ಮಳೆಯಿಂದ ಹೂವಿನ ಬೆಲೆ ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ಹೂವನ್ನು ಕೇಳುವವರಿಲ್ಲ. ಜೊತೆಗೆ ತೆಂಗು, ಶೇಂಗಾ, ರಾಗಿ, ಟಮೋಟೋ ಬೆಳಿಗಳಿಂದಾಗಿ ನಷ್ಟವಾಗಿದೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ವೀರಭದ್ರಪ್ಪ ಚಿತ್ತಯ್ಯ,ಸದಾಶಿವಪ್ಪ,ಬ್ಯಾಡನೂರು ಶಿವು,ದಂಡುಪಾಳ್ಯದ ರಾಮಾಂಜಿನಪ್ಪ,ತಿಪ್ಪೇಸ್ವಾಮಿ,ತಾಳೇಮರದಹಳ್ಳಿ ಗೋವಿಂದಪ್ಪ, ಗುಂಡ್ಲಹಳ್ಳಿ ರಮೇಶ್‌,ಹನುಮಂತರಾಯಪ್ಪ,ರಾಮಾಂಜಿನೇಯ ಹಾಗೂ ಇತರೆ ಅನೇಕ ಮಂದಿ ರೈತ ಸಂಘದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Share this article