ಸೋಲೂರು ಹೋಬಳಿ ಮಾಗಡಿಯಲ್ಲೇ ಉಳಿಸಲು ಆಗ್ರಹ

KannadaprabhaNewsNetwork |  
Published : Oct 10, 2025, 01:00 AM IST
9ಕೆಆರ್ ಎಂಎನ್ 2.ಜೆಪಿಜಿರಾಮನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಆಗಮಿಸಿರುವ ಸೋಲೂರು ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು. | Kannada Prabha

ಸಾರಾಂಶ

ರಾಮನಗರ: ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಮನಗರ: ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಸೇರಿದ ನೂರಾರು ಗ್ರಾಮಸ್ಥರು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಸೋಲೂರು ಹೋಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ಕನ್ನಡ ಕುಮಾರ್ , ಸೋಲೂರು ಹೋಬಳಿಯ ಗ್ರಾಮಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಸಿದಲ್ಲಿ ದೊಡ್ಡಬಳ್ಳಾಪುರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಮೂರು ಬಸ್ಸುಗಳನ್ನು ಬದಲಾಯಿಸುವ ಮತ್ತು ಎರಡು ಕಡೆ ಟೋಲ್ ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದರಿಂದ ಜನರಿಗೆ ತೊಂದರೆಯಾಗಲಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ ದೊಡ್ಡಬಳ್ಳಾಪುರದಲ್ಲಿ ಇದ್ದರೆ, ವಿವಿಧ ನಿಗಮ ಮಂಡಳಿಗಳು ಬೆಂಗಳೂರು ನಗರದ ಮಧ್ಯಭಾಗದಲ್ಲಿದೆ. ಬಹುತೇಕ ಹಳ್ಳಿ ಜನರೇ ಇರುವ ಸೋಲೂರು ಹೋಬಳಿಗೆ ಬಾರಿ ಸಂಕಷ್ಟ ಎದುರಾಗುತ್ತದೆ ಎಂದು ಹೇಳಿದರು.

ಬಹುತೇಕ ಸೋಲೂರು ಭಾಗದಿಂದ ತಾಲೂಕ ಕೇಂದ್ರ ಮಾಗಡಿಗೆ ಮತ್ತು ಜಿಲ್ಲಾ ಕೇಂದ್ರ ರಾಮನಗರಕ್ಕೆ ಒಂದೇ ಬಸ್ ರೂಟ್ ಇರುವುದರಿಂದ, ರಾಮನಗರ ಜಿಲ್ಲಾ ಕೇಂದ್ರದಲ್ಲಿ ಒಂದೇ ಕಡೆ ಎಲ್ಲಾ ಸರ್ಕಾರಿ ಕಚೇರಿಗಳು ಇರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೋಲೂರು ಹೋಬಳಿ ಸೇರಿದಲ್ಲಿ ಎಲ್ಲರ ಆಧಾರ್ ಕಾರ್ಡ್ ದಾಖಲಾತಿಗಳಲ್ಲಿ ಬದಲಾವಣೆ ಮಾಡಿಸಲು ತೊಂದರೆಯಾಗುತ್ತದೆ. ಈಗ ಮಾಗಡಿಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಕೂಗಳತೆ ದೂರದಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುತ್ತಿದೆ. ಕೃಷಿ ಇಲಾಖೆ ,ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ ,ಅರಣ್ಯ ಇಲಾಖೆ ಮುಂತಾದ ಇಲಾಖೆಗಳಿಗೆ ಗ್ರಾಮಸ್ಥರು ಬಹಳ ಸುಲಭವಾಗಿ ತಲುಪಬಹುದು ಎಂದು ತಿಳಿಸಿದರು.

ರಾಜಕೀಯ ಕಾರಣಗಳಿಗಾಗಿ ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಿಂದ ಬೇರ್ಪಡಿಸಿ ಅನ್ಯಾಯ ಮಾಡಬೇಡಿ. ಕೇವಲ ಆಯ್ಕೆಯಾಗಿರುವ ಪಂಚಾಯಿತಿ ಸದಸ್ಯರುಗಳು ನೀಡಿರುವ ಅವೈಜ್ಞಾನಿಕ ವರದಿಗಳನ್ನು ನಂಬಿ ಇಂತಹ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಹೋಬಳಿಯ ಪ್ರತಿ ಗ್ರಾಮದಿಂದಲೂ ಸೇರ್ಪಡೆ ವಿರುದ್ಧ ಸಾಕಷ್ಟು ಆಕ್ಷೇಪಣೆ ಅರ್ಜಿಗಳನ್ನು ಕಂದಾಯ ಇಲಾಖೆಗೆ ತಲುಪಿವೆ. ಅದು ನಿಜವಾದ ಸಾರ್ವಜನಿಕರ ಅಭಿಪ್ರಾಯವಾಗಿರುತ್ತದೆ. ಅದನ್ನು ಗಣನೆಗೆ ತೆಗೆದುಕೊಂಡು ಯಥಾ ಸ್ಥಿತಿ ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲಿ ಉಳಿಸಬೇಕು. ಇಲ್ಲದಿದ್ದರೆ ಎಲ್ಲ ಗ್ರಾಮಸ್ಥರು ಒಟ್ಟಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡ ಕುಮಾರ್ ಎಚ್ಚರಿಕೆ ನೀಡಿದರು.

9ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಆಗಮಿಸಿರುವ ಸೋಲೂರು ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ